ADVERTISEMENT

ಬಡ್ತಿ ಮೀಸಲಾತಿಯಲ್ಲಿ ಅನ್ಯಾಯ: ಖಂಡನೆ

ನ್ಯಾಯ ದೊರಕಿಸಿಕೊಡಲು ಮುಖ್ಯಮಂತ್ರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 10:31 IST
Last Updated 16 ಜುಲೈ 2020, 10:31 IST

ಬೆಳಗಾವಿ: ‘ಅರಣ್ಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರಿಗೆ ಬಡ್ತಿ ಮೀಸಲಾತಿ ಕಲ್ಪಿಸುವಲ್ಲಿ ಅನ್ಯಾಯ ಮಾಡಲಾಗಿದೆ’ ಎಂದು ಸಮಾಜದ ಮುಖಂಡ ಮಲ್ಲೇಶ ಚೌಗಲೆ ದೂರಿದರು.

‘ಬೆಳಗಾವಿ ಅರಣ್ಯ ವಿಭಾಗದಲ್ಲಿ ಅರಣ್ಯ ರಕ್ಷಕ ಹುದ್ದೆಯಲ್ಲಿ ಸದ್ಯ 21 ಮಂದಿ ಪರಿಶಿಷ್ಟ ಜಾತಿ ಹಾಗೂ ಐವರು ಪರಿಶಿಷ್ಟ ಪಂಗಡದ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರು 15 ವರ್ಷಗಳಿಂದ ಅರಣ್ಯ ರಕ್ಷಕ ಹುದ್ದೆಯಲ್ಲಿಯೇ ಇದ್ದಾರೆ. ಇತ್ತೀಚಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯು ಸರ್ಕಾರ ಆದೇಶದ ಪ್ರಕಾರ 116 ಮಂದಿಗೆ ಅರಣ್ಯ ರಕ್ಷಕ ಹುದ್ದೆಯಿಂದ ಉಪವಲಯ ಅರಣ್ಯಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರನ್ನು ಪರಿಗಣಿಸಿಲ್ಲ. ಇದರಿಂದ 21 ಮಂದಿಗೂ ಅನ್ಯಾಯವಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳನ್ನು ವಿಚಾರಿಸಿದರೆ, ಸ್ಪಷ್ಟವಾದ ಕಾರಣ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಅರಣ್ಯ ಇಲಾಖೆಯ ವಿವಿಧ ವೃಂದಗಳಲ್ಲಿ ಸೇವಾ ಹಿರಿತನ ನಿಗದಿಪಡಿಸುವಲ್ಲಿ ಹಾಗೂ ಪದೋನ್ನತಿ ನೀಡುವಾಗ ಉಂಟಾಗಿರುವ ನ್ಯೂನತೆಗಳನ್ನು ಸರಿಪಡಿಸಲು ಸಮಿತಿ ರಚಿಸಲಾಗಿತ್ತು. ಈ ಸಮಿತಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ನ್ಯಾಯ ಒದಗಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಮಿತಿಯಲ್ಲಿ ಹಿರಿಯ ಅಧಿಕಾರಿಗಳು ಮಾತ್ರವೇ ಇದ್ದಾರೆ. ಪರಿಶಿಷ್ಟ ನೌಕರರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿ ಇಲ್ಲದೆ ರಚಿಸಲಾಗಿದೆ. ರಾಜ್ಯದ 13 ವೃತ್ತದಲ್ಲಿನ ಸಾವಿರಾರು ಪರಿಶಿಷ್ಟ ನೌಕರರಿಗೆ ಅನ್ಯಾಯವಾಗಿದೆ. ಬಡ್ತಿ ತ‍ಪ್ಪಿಸಲು ದೊಡ್ಡ ಮಟ್ಟದ ಹುನ್ನಾರ ನಡೆದಿದೆ. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ಬಗ್ಗೆ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರು ಕೂಡಲೇ ಗಮನಹರಿಸಬೇಕು. ಅರ್ಹ ನೌಕರರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮಹಾದೇವ ತಳವಾರ, ಜಗದೀಶ ಸಾವಂತ, ಸುರೇಶ ತಳವಾರ, ಪ್ರಮೋದ ಹೊಸಮನಿ, ಮಹೇಶ್ ಹಟ್ಟಿಹೊಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.