ADVERTISEMENT

ಕನ್ನಡ ಅನ್ನದ ಭಾಷೆಯಾಗಲಿ: ಅಶೋಕ ಚಂದರಗಿ ಆಶಯ

ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:24 IST
Last Updated 7 ನವೆಂಬರ್ 2021, 14:24 IST
ಬೆಳಗಾವಿಯಲ್ಲಿ ಸಪ್ತ ಸ್ವರ ಸಂಗೀತ ಕಲಾ ಬಳಗವು ಎಸ್‌ಜಿಬಿಐಟಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’ವನ್ನು ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಸಾಹಿತಿ ಯ.ರು. ಪಾಟೀಲ ಮೊದಲಾದವರು ಇದ್ದಾರೆ
ಬೆಳಗಾವಿಯಲ್ಲಿ ಸಪ್ತ ಸ್ವರ ಸಂಗೀತ ಕಲಾ ಬಳಗವು ಎಸ್‌ಜಿಬಿಐಟಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’ವನ್ನು ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಸಾಹಿತಿ ಯ.ರು. ಪಾಟೀಲ ಮೊದಲಾದವರು ಇದ್ದಾರೆ   

ಬೆಳಗಾವಿ: ‘ಕನ್ನಡ ಅನ್ನದ ಭಾಷೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು’ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಸಪ್ತ ಸ್ವರ ಸಂಗೀತ ಕಲಾ ಬಳಗವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿನ ಶಿವಬಸವನಗರದ ಎಸ್‌ಜಿಬಿಐಟಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’, ಕವಿಗೋಷ್ಠಿ ಹಾಗೂ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡದಲ್ಲಿ ಓದಿದವರಿಗಷ್ಟೆ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಉದ್ಯೋಗವಕಾಶ ಸಿಗುವಂತಾಗಬೇಕು. ಆಗ ಮಾತೃಭಾಷೆಯೂ ಉಳಿಯುತ್ತದೆ. ನಾಡಿನ ಬಗ್ಗೆ ಯುವಕ-ಯುವತಿಯರಲ್ಲಿ ಅಭಿಮಾನವೂ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಯಾವುದೇ ರಾಜ್ಯಗಳಲ್ಲೂ ಪ್ರಾದೇಶಿಕ ಭಾಷೆಗಳ ರಕ್ಷಣೆಗಾಗಿ ನಿಗಮ, ಪ್ರಾಧಿಕಾರಗಳಿಲ್ಲ. ಆದರೆ, ಕರ್ನಾಟಕದಲ್ಲಿ ಮಾತೃಭಾಷೆ ಹಾಗೂ ಗಡಿ ಸಂರಕ್ಷಣೆಗಾಗಿಯೆ ಸಂಸ್ಥೆಗಳು ಹುಟ್ಟಿಕೊಂಡಿರುವುದು ದುರಂತ. ಕನ್ನಡಿಗರಲ್ಲಿರುವ ಉದಾರತೆಯೇ ಇದಕ್ಕೆ ಕಾರಣ’ ಎಂದು ವಿಷಾದಿಸಿದರು.

ಸಾಹಿತಿ ಯ.ರು. ಪಾಟೀಲ ಮಾತನಾಡಿ, ‘ಮಕ್ಕಳು ಬಳಸಿದರೆ ಮಾತ್ರ ಯಾವುದೇ ಭಾಷೆಯ ಬೆಳವಣಿಗೆಯಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಕನ್ನಡದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಪ್ರತಿ ಮನೆಯಿಂದ ಕನ್ನಡ ಉಳಿಸಿ, ಬೆಳೆಸುವ ಅಭಿಯಾನ ಆರಂಭವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಪಿ.ಎಸ್. ವಂಟಗೋಡಿ ಮಾತನಾಡಿ, ‘ನಾವೂ ಎಲ್ಲ ಭಾಷೆಗಳನ್ನೂ ಪ್ರೀತಿಸಬೇಕು. ಆದರೆ, ಕನ್ನಡವನ್ನು ಪೂಜಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರ ಬಂದು ಕನ್ನಡ ಕಟ್ಟುವ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ‘ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದರೊಂದಿಗೆ, ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿಸುತ್ತಿದ್ದಾರೆ. ಹೆಸರಷ್ಟೇ ಬದಲಾದರೆ ಸಾಲದು. ಈ ಭಾಗದ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಬಾಳಾಸಾಹೇಬ ಉದಗಟ್ಟಿ, ಬಸವರಾಜ ಗಾರ್ಗಿ, ಶ್ರೀರಂಗ ಜೋಶಿ, ಡಾ.ಫಕೀರನಾಯ್ಕ ಗಡ್ಡಿಗೌಡರ, ವೀಣಾ ಕಿಡದಾಳ, ಗಣೇಶ ರಾಯ್ಕರ, ಸುರೇಶ ವಾಘಮೊಡೆ, ಸುಮಾ ಹಡಪದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.