ಗೋಕಾಕ: ‘ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುವುದು ಮತ್ತು ಕೃಷಿ ಪರಿಕರ ಮಾರಾಟಗಾರರು ಸಾಕಷ್ಟು ಪ್ರಮಾಣದಲ್ಲಿ ಕೃಷಿ ಪರಿಕರಗಳ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್ ಹೇಳಿದರು.
ಬುಧವಾರ ಇಲ್ಲಿನ ಪಶು ಸಂಗೋಪನಾ ಇಲಾಖೆಯ ಸಭಾ ಭವನದಲ್ಲಿ ಕರೆದಿದ್ದ ಗೋಕಾಕ ತಾಲ್ಲೂಕು ರಸಗೊಬ್ಬರ ಮಾರಾಟ ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಮುಂಗಾರು ಹಂಗಾಮು ನಿರೀಕ್ಷೆಗೂ ಮೀರಿ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿದ್ದು ಈಗಾಗಲೇ ಎರಡು ಮಳೆ ಆಗಿದ್ದರಿಂದ ರೈತರು ಹದವಾದ ಮಳೆಯಾದ ಮೇಲೆ ಬಿತ್ತನೆ ಮಾಡಲು ಮುಂದಾಗುವಂತೆ ಸಲಹೆ ನೀಡಿದರು.
ವರ್ತಕರಿಂದ ಖರೀದಿಸಿದ ರಸಗೊಬ್ಬರ, ಕೀಟನಾಶಕ, ಪರಿಕರಗಳಿಗೆ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಗ್ರಾಹಕರಿಗೆ ಕಾಣುವಂತೆ ದರಪಟ್ಟಿ ಹಾಕಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಅವಧಿ ಮುಗಿದ ಬೀಜ, ಕೀಟನಾಶಕಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞ) ಸಿ.ಐ.ಹೂಗಾರ ಮಾತನಾಡಿ, ರಸಗೊಬ್ಬರಗಳ ದಾಸ್ತಾನು, ಬಳಕೆ ಪ್ರಮಾಣ ಹಾಗೂ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ 20:20:0:13 ಉಪಯೋಗಿಸುವಂತೆ ಸಲಹೆ ನೀಡಿದರು. ರಸಗೊಬ್ಬರ ಮತ್ತು ಬೀಜ ಕಾಯ್ದೆಗಳ ಕುರಿತು ಕೃಷಿ ಪರಿಕರ ಮಾರಾಟಗಾರರಿಗೂ ಮಾಹಿತಿ ನೀಡಿದರು. ‘ಸಾಥಿ ಪೋರ್ಟಲ್‘ ಕುರಿತು ಪರಿಕರ ಮಾರಾಟಗಾರರಿಗೆ ಮಾಹಿತಿ ನೀಡಿದರು.
ಇಲಾಖೆಯ ತಾಂತ್ರಿಕ ಅಧಿಕಾರಿ ವಿನಾಯಕ ತುರಾಯಿದಾರ ಮಾತನಾಡಿದರು.
ಸಭೆಯಲ್ಲಿ ಜುವಾರಿ ಕಂಪನಿಯ ಮುಖ್ಯಸ್ಥ ಕೃಷ್ಣ ಕುಲಕರ್ಣಿ, ಫೆಡರೇಷನ್ ಮ್ಯಾನೇಜರ್ ಮತ್ತು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರು ಪಾಲ್ಗೊಂಡಿದ್ದರು.
ಛಾಯಾ ಪಾಟೀಲ (ಬಿಟಿಎಂ) ನಿರೂಪಿಸಿದರು. ಸುರೇಶ ಬಿರಾಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.