ADVERTISEMENT

ಲಿಂಗಾಯತರೆಲ್ಲ ಒಂದಾಗಿ ಅನ್ಯಾಯ ಹಿಮ್ಮೆಟ್ಟಿಸಿ: ಜಾಮದಾರ

‘ವಚನದರ್ಶನ: ಮಿಥ್ಯ vs ಸತ್ಯ’ ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 12:46 IST
Last Updated 22 ಏಪ್ರಿಲ್ 2025, 12:46 IST
   

ಬೆಳಗಾವಿ: ‘ಒಳ ಪಂಗಡಗಳ ಜಗಳ ಬಿಟ್ಟು ಲಿಂಗಾಯತರೆಲ್ಲ ಒಂದಾಗಬೇಕು. ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯ ಹಿಮ್ಮೆಟ್ಟಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿದರು.

ಇಲ್ಲಿನ ಎಸ್‌.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ‘ವಚನದರ್ಶನ: ಮಿಥ್ಯ vs ಸತ್ಯ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ 1.35 ಕೋಟಿ ಇದ್ದರೂ ತಪ್ಪಾಗಿ ಮಾಹಿತಿ ನೀಡಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಲಿಂಗಾಯತ ಸಮಾಜ ಛಿದ್ರಗೊಂಡಿದೆ. ವಚನಗಳು ಭಾರತದ ಪರಂಪರೆಗೆ ವಿರುದ್ಧ ಎಂದು ಬಿಂಬಿಸುವ ಯತ್ನ ನಡೆಯಿತು. ಇಲ್ಲೇ ಹುಟ್ಟಿ, ಇಲ್ಲಿಯೇ ಬೆಳೆದ ಲಿಂಗಾಯತರಿಗೆ ಬೇರೆಯವರು ರಾಷ್ಟ್ರೀಯತೆ ಕಲಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಷಟಸ್ಥಲ್‌ ಧ್ವಜಾರೋಹಣ ನೆರವೇರಿಸಿದರು. ಪ್ರೊ.ಸಿದ್ದು ಯಾಪಲಪರವಿ ಮಾತನಾಡಿದರು. ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಸ್.ಕೌಜಲಗಿ, ರಾಷ್ಟ್ರೀಯ ಬಸವದಳದ ಬೆಳಗಾವಿ ಅಧ್ಯಕ್ಷ ಅಶೋಕ ಬೆಂಡಿಗೇರಿ, ಈರಣ್ಣ ದೇವಣ್ಣವರ, ಚಂದ್ರಶೇಖರ ಗುಡಿಸಿ, ಅಶೋಕ ಮಳಗಲಿ, ಪ್ರೊ.ಮಂಜುನಾಥ ಶರಣಪ್ಪನವರ ಇದ್ದರು.

‘ದೋಷಗಳನ್ನು ತಿಳಿಸುವ ಕೆಲಸವಾಗಲಿ’

‌ಗ್ರಂಥ ಬಿಡುಗಡೆಗೊಳಿಸಿದ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ‘ಬಸವಾದಿ ಶಿವಶರಣರ ಆಶಯಕ್ಕೆ ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗುತ್ತಿದೆ. ಪುನಃ ಪುರೋಹಿತಶಾಹಿ ವ್ಯವಸ್ಥೆ ಜಾರಿಗೆ ತರಲು ಯತ್ನಿಸಲಾಗಿದೆ. ಬಸವಣ್ಣನವರ ಕ್ರಾಂತಿ ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಈ ಗ್ರಂಥದಲ್ಲಿನ ದೋಷಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿಯೇ ‘ವಚನದರ್ಶನ ಮಿಥ್ಯ vs ಸತ್ಯ’ ಗ್ರಂಥ ಲೋಕಾರ್ಪಣೆ ಮಾಡಿದ್ದೇವೆ’ ಎಂದರು.

‘ಲಿಂಗಾಯತ ಧರ್ಮವೇ ಸತ್ಯ’

ಕಾರ್ಯಕ್ರಮ ಉದ್ಘಾಟಿಸಿದ ಹಂದಿಗುಂದದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ‘ವಚನದರ್ಶನ’ ಗ್ರಂಥವೇ ಮಿಥ್ಯ. ಬಸವಣ್ಣನವರ ಲಿಂಗಾಯತ ಧರ್ಮವೇ ಸತ್ಯ. ಶರಣ ಪರಂಪರೆಯ ವಾರಸುದಾರರು ವಿಭೂತಿ ಬಿಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಓಡಾಡುತ್ತಿರುವುದು ನೋವಿನ ಸಂಗತಿ’ ಎಂದರು.

‘ಗುರು–ವಿರಕ್ತರು ಒಂದಾಗಬೇಕು ಎಂದರೆ ಅದು ಹೇಗೆ ಸಾಧ್ಯ? ಅವರು ಏನು ಹೇಳುತ್ತಾರೆಯೋ ಹೇಳಲಿ. ನಮ್ಮ ವಿಚಾರವನ್ನು ನಾವು ಸ್ಪಷ್ಟಪಡಿಸುವುದು ಮುಖ್ಯ. ನೀವು ವೀರಶೈವರೋ ಅಥವಾ ಲಿಂಗಾಯತರೋ ಎಂದು ಸ್ಪಷ್ಟವಾಗಿ ಹೇಳಿ. ವೀರಶೈವರಾದರೆ ಅಲ್ಲಿಯೇ ಇರಿ. ಲಿಂಗಾಯತರಾದರೆ ಇಲ್ಲಿಗೆ ಬನ್ನಿ. ಎರಡನ್ನು ಏಕಕಾಲಕ್ಕೆ ಹೇಳಬೇಡಿ’ ಎಂದು ಸಲಹೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.