ADVERTISEMENT

‘ಲಿಂಗಾಯತ ಪಂಚಮಸಾಲಿ’ ಎಂದೇ ನಮೂದಿಸಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 20:41 IST
Last Updated 18 ಸೆಪ್ಟೆಂಬರ್ 2025, 20:41 IST
   

ಬೆಳಗಾವಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜದವರು ‘ಲಿಂಗಾಯತ ಪಂಚಮಸಾಲಿ’ ಎಂದು ನಮೂದಿಸಬೇಕು’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಪಂಚಮಸಾಲಿ ವಕೀಲರ ಪರಿಷತ್ ನಿರಂತರ ಸಭೆಗಳನ್ನು ನಡೆಸಿ ಮತ್ತು ಸಮಗ್ರವಾಗಿ ಚರ್ಚಿಸಿಯೇ ಈ ನಿರ್ಣಯ ತೆಗೆದುಕೊಂಡಿದೆ. ಹೀಗಾಗಿ ಮಹಾಸಭೆ, ಮಠಾಧೀಶರು ಮತ್ತು ಸಂಘ– ಸಂಸ್ಥೆಗಳ ಹೇಳಿಕೆಗೆ ಯಾರೂ ಕಿವಿಗೊಡಬಾರದು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಮೀಕ್ಷೆ ವಿಷಯದಲ್ಲಿ ಪಂಚಮಸಾಲಿ ಸಮಾಜಕ್ಕೆ ನಾವು ನೀಡಿದ ಆದೇಶವನ್ನೇ ಎಲ್ಲರೂ ಪಾಲಿಸಬೇಕೇ ಹೊರತು ಬೇರೆಯವರ ಮಾತು ಕೇಳಬಾರದು. ಹುಬ್ಬಳ್ಳಿಯಲ್ಲಿ ಜರುಗುವ ಏಕತಾ ಸಮಾವೇಶದಲ್ಲಿ ಪಂಚಮಸಲಿ ಸಮುದಾಯದ ಯಾರೊಬ್ಬರೂ ಭಾಗವಹಿಸುವುದು ಬೇಡ’ ಎಂದರು.

ADVERTISEMENT

ಸೆ.20ಕ್ಕೆ ‘ಪ್ರತಿಜ್ಞಾ ಕ್ರಾಂತಿ’ಗೆ ಚಾಲನೆ

‘ಮೀಸಲಾತಿ ಪಡೆಯುವುದಕ್ಕಾಗಿ ಎಂಟನೇ ಹಂತದ ಹೋರಾಟಕ್ಕೆ ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಸೆಪ್ಟೆಂಬರ್ 20ರಂದು ಚಾಲನೆ ನೀಡಲಾಗುತ್ತಿದೆ.

ಪಂಚಮಸಾಲಿ ‘ಪ್ರತಿಜ್ಞಾ ಕ್ರಾಂತಿ’ ಹೆಸರಿನಲ್ಲಿ ನಡೆಯುವ ಹೋರಾಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಭಾಗವಹಿಸುವರು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಸೆಪ್ಟೆಂಬರ್ 22ರಂದು ರಾಮದುರ್ಗದಲ್ಲಿ ಮತ್ತು ಅಕ್ಟೋಬರ್ 4ರಂದು ಬಾಗಲಕೋಟೆ ಜಿಲ್ಲೆಯ ರಬಕವಿ– ಬನಹಟ್ಟಿಯಲ್ಲೂ ಪ್ರತಿಜ್ಞಾ‌ ಕ್ರಾಂತಿ ಹೋರಾಟ ಮಾಡಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.