ರಾಮದುರ್ಗ: ‘ಜಾತಿ ಗಣತಿ ಸಮಯದಲ್ಲಿ ಏನು ಬರೆಯಿಸಬೇಕು ಎನ್ನುವ ಗೊಂದಲದಲ್ಲಿರುವ ಲಿಂಗಾಯತ ಸಮಾಜಕ್ಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಂಚಾಚಾರ್ಯರು, ಶಿವಾಚಾರ್ಯರು ಮತ್ತು ಗುರುವಿರಕ್ತರು ಒಂದಾಗಿ ಒಂದೇ ವೇದಿಕೆಯಲ್ಲಿ ನಿರ್ಧಾರ ತೆಗೆದುಕೊಂಡು ಸಂದೇಶ ನೀಡಬೇಕು‘ ಎಂದು ನರಗುಂದದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಸುಕ್ಷೇತ್ರ ಕಲ್ಲೂರು ಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆದ ತೊಂಟದಾರ್ಯಮಠ ಶಿರೋಳದ ಶಾಂತಲಿಂಗ ಸ್ವಾಮೀಜಿಯ 16ನೇ ವರ್ಷದ ಮೌನಾನುಷ್ಠಾನ ಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಈ ವಿಷಯವನ್ನು ದಾವಣಗೇರಿಯಲ್ಲಿ ನಡೆದ ಶಿವಾಚಾರ್ಯರ ಸಭೆಯಲ್ಲಿ ಕೂಡಾ ಪ್ರಸ್ತಾಪಿಸಿದ್ದೇನೆ. ಸಮಾಜದ ಮುಖಂಡರಾದ ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಎಲ್ಲ ನಾಯಕರು ಕೂಡಾ ಈ ಕುರಿತು ಚಿಂತನೆ ನಡೆಸಿ ಸರ್ಕಾರದ ಸೌಲಭ್ಯವನ್ನು ಮಕ್ಕಳಿಗೆ ಕೊಡಿಸಲು ಮುಂದಾಗಬೇಕು‘ ಎಂದು ಹೇಳಿದರು.
ಶಾಂತಲಿಂಗ ಸ್ವಾಮೀಜಿ ಒಂದು ತಿಂಗಳು ಕೈಗೊಂಡ ಮೌನಾನುಷ್ಠಾನದ ಫಲ ನಾಡಿನ ಜನರಿಗೆ ಲಭಿಸಲಿ, ಮಳೆ ಬೆಳೆ ಚನ್ನಾಗಿ ಆಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗದ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ದೇಶದ ಮಕ್ಕಳಿಗೆ ವಚನಗಳ ಅಧ್ಯಯನದ ಮಹತ್ವ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಬಸವಾದಿ ಶರಣರು ವಚನಗಳನ್ನು ರಚಿಸಿದ್ದಲ್ಲದೆ ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದಿದ್ದಾರೆ ಅಂತಹ ವಚನಗಳು ನಮಗೆಲ್ಲ ಮಾದರಿಯಾಗಿವೆ ಎಂದರು.
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಮಾತನಾಡಿ, ವಿಶ್ವಗುರು ಬಸವಣ್ಣನವರು ಮತ್ತು ಸಮಕಾಲೀನ ಶರಣರು ಜನಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ನೀಡಿದ್ದಾರೆ. ಅವುಗಳನ್ನು ಆಚರಣೆ ಮಾಡಿದರೆ ಮನುಷ್ಯ ಸುಸಂಸ್ಕೃತ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವ 25ನೇ ವರ್ಷದ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ರಾಮದುರ್ಗದ ಶಾಂತವೀರಸ್ವಾಮೀಜಿ, ಮೊರಬದ ಶಾಂತವೀರ ಶಿವಾಚಾರ್ಯರು, ನರಗುಂದದ ಸಿದ್ಧಲಿಂಗ ಶಿವಾಚಾರ್ಯರು, ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಶಿವಕುಮಾರ ಸ್ವಾಮೀಜಿ, ಮೊರಬದ ಆನಂದ ಸ್ವಾಮೀಜಿ, ವಿಜಯಪುರದ ಅಣ್ಣಾರಾಯ ಬಿರಾದರ, ಬಸವರಾಜ ಚಿಕ್ಕಮಠ, ಸುರೇಶ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.