ADVERTISEMENT

ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಮುದುಡಿದ ಪುಷ್ಪ ಕೃಷಿ

ತಿಂಗಳಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ

ಸುಧಾಕರ ಎಸ್.ತಳವಾರ, ಬೆಂಗಳೂರು
Published 14 ಏಪ್ರಿಲ್ 2020, 19:30 IST
Last Updated 14 ಏಪ್ರಿಲ್ 2020, 19:30 IST
ಗಳತಗಾ ಗ್ರಾಮದಲ್ಲಿ ರಾಜೇಂದ್ರ ಪವಾರ ಅವರು ಬೆಳೆದಿರುವ ಜರ್ಬೆರಾ ಹೂವುಗಳು
ಗಳತಗಾ ಗ್ರಾಮದಲ್ಲಿ ರಾಜೇಂದ್ರ ಪವಾರ ಅವರು ಬೆಳೆದಿರುವ ಜರ್ಬೆರಾ ಹೂವುಗಳು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೊರೊನಾ ವೈರಾಣು ಸೃಷ್ಟಿಸಿರುವ ತಲ್ಲಣದಿಂದಾಗಿ ತಾಲ್ಲೂಕಿನಲ್ಲಿ ಪುಷ್ಪ ಕೃಷಿ ಮದುಡಿ ಹೋಗಿದೆ.

ಕಷ್ಟಪಟ್ಟು ಬೆಳೆದ ಹೂವುಗಳು ಮಾರಾಟವಾಗದೆ ತೋಟದಲ್ಲೇ ಬಾಡಿ ಹೋಗುತ್ತಿರುವುದನ್ನು ಕಂಡು ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಕೃಷ್ಣಾ, ದೂಧ್‌ಗಂಗಾ ಮತ್ತು ವೇದಗಂಗಾ ನದಿ ಪಾತ್ರದ ಅನೇಕ ರೈತರು ಪುಷ್ಪ ಕೃಷಿ ನೆಚ್ಚಿಕೊಂಡಿದ್ದಾರೆ. ಇಲ್ಲಿ ಜರ್ಬೆರಾ, ಸೇವಂತಿಗೆ, ಗುಲಾಬಿ ಮತ್ತು ಚೆಂಡು ಹೂಗಳನ್ನು ಬೆಳೆಯಲಾಗುತ್ತಿದೆ.

ADVERTISEMENT

ಮುಂಬೈ ಮಾರುಕಟ್ಟೆಗೆ:ನಿಪ್ಪಾಣಿ ತಾಲ್ಲೂಕಿನ ಡೋಣೆವಾಡಿಯ ದೂಧ್‌ಗಂಗಾ ಫೂಲ್ (ಹೂವು) ಉತ್ಪಾದಕರ ಸಂಘವು ಈ ಭಾಗದ ರೈತರು ಬೆಳೆದ ಹೂವುಗಳನ್ನು ಸಂಗ್ರಹಿಸಿ ಎರಡು ದಿನಕ್ಕೊಮ್ಮೆ ಮುಂಬೈ ಮಾರುಕಟ್ಟೆಗೆ ಟನ್‌ಗಟ್ಟಲೆ ಕಳುಹಿಸುತ್ತಿತ್ತು. ಸಂಘವು ಸಾಗಣೆ ವೆಚ್ಚ ಭರಿಸಿಕೊಂಡು ಉಳಿದ ಹಣವನ್ನು ಆಯಾ ರೈತರಿಗೆ ತಲುಪಿಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.

ಆದರೆ, ಕೊರೊನಾ ಸೋಂಕು ಹರಡುತ್ತಿರುವುದರಿಂದ ಲಾಕ್‌ಡೌನ್‌ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಸ್ಥಗಿತಗೊಂಡಿದೆ. ಇಲ್ಲಿಂದ ಹೂವು ಸಾಗಾಣಿಕೆ ನಿಲ್ಲಿಸಲಾಗಿದೆ. ಪರಿಣಾಮ ಹೂವುಗಳು ಗಿಡಗಳಲ್ಲೇ ಬಾಡಿ ಹೋಗುತ್ತಿವೆ. ರೈತರು ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಬಹಳ ನಷ್ಟ:‘ಈ ಭಾಗದ ಗಳತಗಾ, ಸೌಂದಲಗಾ, ಡೋಣೆವಾಡಿ ಮೊದಲಾದೆಡೆ ಪಾಲಿಹೌಸ್‌ನಲ್ಲಿ ಜರ್ಬೆರಾ ಕೃಷಿ ಕೈಗೊಂಡಿದ್ದು, ಪ್ರತಿ ಎರಡು ದಿನಕ್ಕೊಮ್ಮೆ ಸರಾಸರಿ 8ಸಾವಿರ ಹೂವುಗಳನ್ನು ಮುಂಬೈ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದೆವು. ಲಾಕ್‌ಡೌನ್‌ಗಿಂತ ಮುಂಚೆ 20 ಹೂವುಗಳ ಒಂದು ಬಾಕ್ಸ್‌ಗೆ ₹ 400 ದರವಿತ್ತು. ಎರಡು ದಿನಕ್ಕೊಮ್ಮೆ ಈ ಭಾಗದ ರೈತರಿಂದ ಸರಾಸರಿ 10 ಟನ್‌ಗಳಷ್ಟು ಚೆಂಡು ಹೂವು ಸರಬರಾಜಾಗುತ್ತಿತ್ತು. ಅಲ್ಲದೇ, ಗುಲಾಬಿ ಮತ್ತು ರಾಜಾ ಸೇವಂತಿ ಹೂವುಗಳನ್ನು ಸಂಗ್ರಹಿಸಿ ಮುಂಬೈಗೆ ಸರಬರಾಜು ಮಾಡುತ್ತಿದ್ದೆವು. ಆದರೆ, ಲಾಕ್‌ಡೌನ್‌ನಿಂದಾಗಿ ಹೂವು ಸರಬರಾಜು ಸ್ಥಗಿತಗೊಂಡಿದೆ. ರೈತರಿಗೆ ಬಹಳ ಆರ್ಥಿಕ ನಷ್ಟ ಉಂಟಾಗುತ್ತಿದೆ’ ಎಂದು ಡೋಣೆವಾಡಿಯ ದೂಧ್‌ಗಂಗಾ ಫೂಲ್‌ ಉತ್ಪಾದಕರ ಸಂಘದ ಮುಖ್ಯಸ್ಥ ಜನಾರ್ಧನ ಘಾಟಗೆ ಹೇಳುತ್ತಾರೆ.

‘10 ಗುಂಟೆ ಭೂಮಿಯಲ್ಲಿ ಪಾಲಿಹೌಸ್‌ನಲ್ಲಿ ಜರ್ಬೆರಾ ಪುಷ್ಪ ಕೃಷಿ ಕೈಗೊಂಡಿದ್ದೇನೆ. ಪ್ರತಿ ಎರಡು ದಿನಕ್ಕೊಮ್ಮೆ ಸರಾಸರಿ 1,700 ಹೂವುಗಳನ್ನು ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದೆ. ಆದರೆ, ಲಾಕ್‌ಡೌನ್‌ನಿಂದಾಗಿ ಹೂವು ಸಾಗಾಟ ಸ್ಥಗಿತಗೊಂಡಿದ್ದು, ಮೂರೂವರೆ ಲಕ್ಷ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ’ ಎಂದು ಗಳತಗಾ ಗ್ರಾಮದ ಪುಷ್ಪ ಕೃಷಿಕ ರಾಜೇಂದ್ರ ಪವಾರ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.