ADVERTISEMENT

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮದ್ದು: ರಮೇಶ ಜಾರಕಿಹೊಳಿ

ಜಲಸಂಪನ್ಮೂಲ ಸಚಿವರಿಂದ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:40 IST
Last Updated 29 ಮಾರ್ಚ್ 2020, 13:40 IST
ಗೋಕಾಕದಲ್ಲಿ ಭಾನುವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನಗರಸಭೆ ಸದಸ್ಯ ಎಸ್.ಎ.ಕೋತ್ವಾಲ್ ಅವರೊಂದಿಗೆ ದ್ವಿಚಕ್ರವಾಹನದಲ್ಲಿ ನಗರ ಸಂಚಾರ ನಡೆಸಿದರು
ಗೋಕಾಕದಲ್ಲಿ ಭಾನುವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನಗರಸಭೆ ಸದಸ್ಯ ಎಸ್.ಎ.ಕೋತ್ವಾಲ್ ಅವರೊಂದಿಗೆ ದ್ವಿಚಕ್ರವಾಹನದಲ್ಲಿ ನಗರ ಸಂಚಾರ ನಡೆಸಿದರು   

ಗೋಕಾಕ: ‘ಜನಸಾಮಾನ್ಯರ ಹಿತ ರಕ್ಷಣೆಗಾಗಿ ಘೋಷಣೆಯಾಗಿರುವ ಲಾಕ್‌ಡೌನ್‌ ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರಿಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಮಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

ಭಾನುವಾರ ಇಲ್ಲಿನ ಗೃಹ ಕಚೇರಿಯಲ್ಲಿ ತಾಲ್ಲೂಕು ಆಡಳಿತ, ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ಹರಡುವುದನ್ನು ತಡೆಯುವುದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಹತ್ವದ್ದಾಗಿದೆ. ಈ ವಿಷಯವನ್ನು ಜನರಿಗೆ ಮನದಟ್ಟು ಮಾಡಬೇಕು. ಪೊಲೀಸರು ಜಾಗೃತಿ ಮೂಡಿಸಬೇಕೆ ಹೊರತು ಬೆದರಿಸಬಾರದು’ ಎಂದು ತಿಳಿಸಿದರು.

ADVERTISEMENT

‘ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಪ್ರತಿನಿಧಿಗಳು ತಮ್ಮ ಪ್ರದೇಶದಲ್ಲಿ ದಿನವೂ ಸಂಚರಿಸಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಲಾಕ್‌ಡೌನ್‌ ಉಲ್ಲಂಘಿಸದಂತೆ ತಿಳಿಸಬೇಕು. ಬಡ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಜೀವನಾವಶ್ಯ ವಸ್ತುಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದೇ, ನ್ಯಾಯಯುತ ಬೆಲೆಗೆ ಮಾರಬೇಕು’ ಎಂದು ಕೋರಿದರು.

ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಟಿಎಚ್‌ಒ ಡಾ.ರವೀಂದ್ರ ಅಂಟಿನ, ಡಿವೈಎಸ್ಪಿ ಪ್ರಭು ಡಿ.ಟಿ., ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ಇದ್ದರು.

ಇದಕ್ಕೂ ಮುನ್ನ, ಸಚಿವರು ತಮ್ಮ ಮಿತ್ರ, ನಗರಸಭೆ ಹಿರಿಯ ಸದಸ್ಯ ಎಸ್.ಎ. ಕೋತ್ವಾಲ್ ಅವರೊಂದಿಗೆ ದ್ವಿಚಕ್ರವಾಹನದಲ್ಲಿ ನಗರ ಪ್ರದಕ್ಷಿಣೆ ನಡೆಸಿದರು. ಇಬ್ಬರೂ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಹಾಕಿದ್ದರು. ಆದರೆ, ಹೆಲ್ಮೆಟ್‌ ಧರಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.