ADVERTISEMENT

ಅಥಣಿ | ಲಾಕ್‌ಡೌನ್‌ ಪರಿಣಾಮ, ಊಟಕ್ಕೂ ಪರದಾಡುತ್ತಿರುವ ಕುಟುಂಬ

ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಗೆ ಸಂಕಷ್ಟ

ಪರಶುರಾಮ ನಂದೇಶ್ವರ
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ಅನಾರೋಗ್ಯಪೀಡಿತ ತಂದೆ ಹಾಗೂ ತಾಯಿಯೊಂದಿಗೆ ಮಹಾದೇವಿ ಅಡಿಹುಡಿ
ಅನಾರೋಗ್ಯಪೀಡಿತ ತಂದೆ ಹಾಗೂ ತಾಯಿಯೊಂದಿಗೆ ಮಹಾದೇವಿ ಅಡಿಹುಡಿ   

ಅಥಣಿ: ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಅಬ್ಬಿಹಾಳ ರಸ್ತೆಗೆ ಹೊಂದಿಕೊಂಡಿರುವ ಜ್ಯೋತಿಬಾ ದೇವಸ್ಥಾನದ ಹತ್ತಿರವಿರುವ ಬಾಡಿಗೆ ಮನೆಯಲ್ಲಿರುವ ಕುಟುಂಬದ ಮೂವರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಊಟಕ್ಕೂ ಪರದಾಡುತ್ತಿದ್ದಾರೆ.

ವಯಸ್ಸಾದ ತಂದೆ–ತಾಯಿಯೊಂದಿಗೆ ವಾಸಿಸುವ ಮಹಾದೇವಿ ಅಡಿಹುಡಿ ಮನೆ ಮನೆಗಳಿಗೆ ತೆರಳಿ ಪಾತ್ರೆ ತೊಳೆದು ಅದರಿಂದ ಸಿಗುವ ಹಣದಿಂದ ಜೀವನ ನಡೆಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅವರಿಗೆ ಕೆಲಸ ಇಲ್ಲದಂತಾಗಿದೆ. 85 ವರ್ಷ ವಯಸ್ಸಿನ ತಂದೆ 2 ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾರೆ. ಎಲ್ಲರನ್ನೂ ನೋಡಿಕೊಳ್ಳಲು ಆಗದೆ ಮಹಾದೇವಿ ಸಂಕಷ್ಟಪಡುತ್ತಿದ್ದಾರೆ.

ಈಗ ಅವರನ್ನು ಯಾವ ಮನೆಗಳವರೂ ಕೆಲಸಕ್ಕೆ ಕರೆಯುತ್ತಿಲ್ಲ. ಹೀಗಾಗಿ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಬೇಡಿ ತಿನ್ನುವ ಪರಿಸ್ಥಿತಿ ಅವರಿಗೆ ಬಂದಿದೆ. ದಾನಿಗಳು ಅಥವಾ ಸ್ಥಳೀಯ ಸಂಸ್ಥೆಯಿಂದ ನೆರವಿನ ನಿರೀಕ್ಷೆಯಲ್ಲಿ ಈ ಕುಟುಂಬದವರಿದ್ದಾರೆ.

ADVERTISEMENT

‘ತಂದೆ ಕೇದಾರಿ ಅಡಿಹುಡಿ ಹಾಗೂ ತಾಯಿ ಯಲ್ಲವ್ವ ಅಡಿಹುಡಿ ಅವರಿಗೆ ಮಾಸಾಶನ ಬಂದಿಲ್ಲ. ಅವರಿಗೆ ನಾಲ್ಕು ತಿಂಗಳಿಂದ ಮಾಸಾಶನ ಬಂದಿಲ್ಲ. ಕೇಳಲು ಹೋದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಅವರು ತಿಳಿಸಿದರು.

ಇಲ್ಲಿನ ಮೀರಜ್‌ ರಸ್ತೆಗೆ ರಸ್ತೆಗೆ ಹೊಂದಿಕೊಂಡಿದ್ದ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದ 21 ಕುಟುಂಬಗಳಲ್ಲಿ ಮಹಾದೇವಿ ಕುಟುಂಬವೂ ಒಂದು. ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣಕ್ಕೆಂದು ಆಗಿನ ಶಾಸಕ ಲಕ್ಷ್ಮಣ ಸವದಿ, ಅಥಣಿ ತಹಶೀಲ್ದಾರ್, ಚಿಕ್ಕೋಡಿಯ ಆಗಿನ ಪ್ರಭಾರ ಎಸಿ, ಪುರಸಭೆ ಅಧಿಕಾರಿ ಮೊದಲಾದವರು ತೆರವುಗೊಳಿಸಿದ್ದರು. ಈ ಕುಟುಂಬಗಳಿಗೆ ಜಾಗ ಹಾಗೂ ಮನೆ ಮಂಜೂರು ಮಾಡಿಸಿಕೊಡುವುದಾಗಿ ಸವದಿ ಭರವಸೆ ನೀಡಿದ್ದರು. ಇದಾಗಿ ನಾಲ್ಕು ವರ್ಷಗಳೇ ಕಳೆದಿದ್ದರೂ ಭರವಸೆ ಈಡೇರಿಲ್ಲ!

‘ಈಗ ಉಪ ಮುಖ್ಯಮಂತ್ರಿಯೂ ಆಗಿರುವ ಸವದಿ ಅವರು ಮನಸ್ಸು ಮಾಡಿದರೆ ನಮಗೆ ಮನೆ ಕಟ್ಟಿಕೊಡುವುದು ದೊಡ್ಡ ವಿಷಯವೇನಲ್ಲ. ಬಡವರಾದ ನಮಗೆ ನೆರವಾಗಬೇಕು’ ಎಂದು ಮಹಾದೇವಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.