ADVERTISEMENT

ವಕೀಲರು ಇಲ್ಲದೆಯೂ ಅರ್ಜಿದಾರರು ಮೊಕದ್ದಮೆ ದಾಖಲಿಸಬಹುದು: ರವೀಂದ್ರ ಪಲ್ಲೇದ

ಕಾಯಂ ಲೋಕ ಅದಾಲತ್ ಅಧ್ಯಕ್ಷರೂ ಆಗಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಪಲ್ಲೇದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 2:24 IST
Last Updated 12 ಆಗಸ್ಟ್ 2025, 2:24 IST
ರವೀಂದ್ರ ಪಲ್ಲೇದ
ರವೀಂದ್ರ ಪಲ್ಲೇದ   

ಬೆಳಗಾವಿ: ‘ನಗರದಲ್ಲಿ 2007ರಿಂದ ಕಾರ್ಯನಿರ್ವಹಿಸುತ್ತಿರುವ ಕಾಯಂ ಲೋಕ ಅದಾಲತ್‌ನಲ್ಲಿ ಜನರು ತ್ವರಿತವಾಗಿ ತಮ್ಮ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದು. ಅರ್ಜಿದಾರರು ವಕೀಲರೊಂದಿಗೆ ಅಥವಾ ವಕೀಲರು ಇಲ್ಲದೆಯೂ ಮೊಕದ್ದಮೆ ದಾಖಲಿಸಬಹುದು’ ಎಂದು ಕಾಯಂ ಲೋಕ ಅದಾಲತ್ ಅಧ್ಯಕ್ಷರೂ ಆಗಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಪಲ್ಲೇದ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಾಯಂ ಲೋಕ ಅದಾಲತ್‌ನಲ್ಲಿ ಈಗ 470ಕ್ಕೂ ಅಧಿಕ ಪ್ರಕರಣ ಇತ್ಯರ್ಥವಾಗದೆ ಉಳಿದಿವೆ. ನಮ್ಮಲ್ಲಿ ಪ್ರಕರಣ ದಾಖಲಿಸಲು ಯಾವುದೇ ಶುಲ್ಕ ಪಡೆಯುವುದಿಲ್ಲ’ ಎಂದರು.

‘ಹೆಸ್ಕಾಂಗೆ ಸಂಬಂಧಿಸಿದ ಅವಘಡಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು, ಆಸ್ಪತ್ರೆ ಸೇವೆಗಳು, ವಿಮೆ ಸೇವೆಗಳು, ಇತರೆ ವಿವಾದಗಳಿಗೆ ಸಂಬಂಧಿಸಿ ನಮ್ಮಲ್ಲಿ ಪ್ರಕರಣ ದಾಖಲಿಸಬಹುದು. ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡಿ, ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ. ಪ್ರತಿವಾದಿಗಳಿಂದ ಯಾವ ಪ್ರತಿಕ್ರಿಯೆ ಬಾರದಿದ್ದರೆ, ನಾವೇ ತೀರ್ಪು ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಜನರು ಕಾಯಂ ಲೋಕ ಅದಾಲತ್ ಸಂಪರ್ಕಿಸುವುದರಿಂದ ಇತರೆ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಗೊಳಿಸುತ್ತದೆ’ ಎಂದರು.

‘ನಮ್ಮೊಂದಿಗೆ ವಕೀಲರ ಸಮಿತಿಯು ಅರ್ಜಿದಾರರಿಗೆ ದೂರು ಸಲ್ಲಿಸುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡುತ್ತದೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ಅವರು ಹಾಜರಾಗುತ್ತಾರೆ. ಅರ್ಜಿದಾರರಿಗೆ ವಕೀಲರ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದಲೇ ಪಾವತಿಸಲಾಗುತ್ತದೆ’ ಎಂದು ಹೇಳಿದರು.

‘20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ’

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ‘ನಾವು ವರ್ಷಕ್ಕೆ ನಾಲ್ಕು ಲೋಕ ಅದಾಲತ್‌ ನಡೆಸುತ್ತೇವೆ. ಈ ವರ್ಷದ ಮೂರನೇ ಅವಧಿಯ ಅದಾಲತ್‌ ಸೆಪ್ಟೆಂಬರ್ 13ರಂದು ನಡೆಸಲು ತೀರ್ಮಾನಿಸಿದ್ದೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಿದ್ದೆವು. ಈ ಪೈಕಿ 16665 ಪ್ರಕರಣ ಇತ್ಯರ್ಥಗೊಳಿಸಿದ್ದೇವೆ. ಮುಂದಿನ ಅದಾಲತ್‌ನಲ್ಲಿ 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.