ADVERTISEMENT

ಲೋಕಸಭೆ ಚುನಾವಣೆ: ಬೆಳಗಾವಿಯಿಂದ ಚಿಕ್ಕೋಡಿಗೆ ತೆರಳಿದ ಜೆ.ಪಿ‌.ನಡ್ಡಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 6:36 IST
Last Updated 5 ಮಾರ್ಚ್ 2024, 6:36 IST
   

ಬೆಳಗಾವಿ: ವಿಶೇಷ ವಿಮಾನದ ಮೂಲಕ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಂಸದೆ ಮಂಗಲಾ ಅಂಗಡಿ ಸ್ವಾಗತಿಸಿದರು.

ನಿಲ್ದಾಣದ ಒಳಗಡೆಯೇ ಕೆಲ ನಿಮಿಷ ಮಾತುಕತೆ ನಡೆಸಿದ ನಡ್ಡಾ, ಹೆಲಿಕಾಪ್ಟರ್ ಮೂಲಕ‌ ಚಿಕ್ಕೋಡಿಗೆ ಪ್ರಯಾಣ ಬೆಳೆಸಿದರು.

ಚಿಕ್ಕೋಡಿಯಲ್ಲಿ ಆಯೋಜಿಸಿದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಳಗಾವಿಯಲ್ಲಿ ಕೋರ್ ಕಮಿಟಿ ಸಭೆ ನಡೆಸುವರು. ಅದರ ಬಳಿಕ ನಗರದಲ್ಲೇ ಬುದ್ಧಿಜೀವಿಗಳ ಜತೆಗೆ ‌ಜೆ.ಪಿ.ನಡ್ಡಾ ಸಂವಾದ ನಡೆಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ‌ ತಿಳಿಸಿದೆ.

ADVERTISEMENT

ಮಧ್ಯಾಹ್ನ ಅವರು ಸಂಸದೆ ಮಂಗಲಾ ಅಂಗಡಿ ಅವರ ಮನೆಯಲ್ಲಿ‌ ಊಟ ಮಾಡಲಿದ್ದಾರೆ‌.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಸರಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಬೆಳಗಾವಿಯಿಂದಲೇ ಚುನಾವಣಾ ತಂತ್ರಗಾರಿಕೆ ಹೆಣೆಯಲು ಬಿಜೆಪಿ ಸಜ್ಜಾಗಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳನ್ನೇ ನಡ್ಡಾ ಟಾರ್ಗೆಟ್ ಮಾಡಿದ್ದಾರೆ. ಈಗಾಗಲೇ ಬೆಳಗಾವಿ, ಚಿಕ್ಕೋಡಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯನ್ನ ನಡ್ಡಾ ಪಡೆದಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ತಲಾ ಮೂವರು ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ರವಾನಿಸಿದೆ ಎಂದು ಮೂಲಗಳು‌ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.