ಪ್ರಾತಿನಿಧಿಕ ಚಿತ್ರ
ಲೋಂಡಾ (ಖಾನಾಪುರ): ಮದುವೆ ಕಾರ್ಯದ ಸಂಭ್ರಮ ಅನುಭವಿಸಲು ಸಂಬಂಧಿಗಳ ಮನೆಗೆ ತೆರಳಿದ್ದವರು ಮಸಣ ಸೇರಿದ್ದಾರೆ. ಒಂದೇ ಕುಟುಂಬದ ನಾಲ್ವರನ್ನು ರಕ್ಕಸ ಗಾತ್ರದ ಸಮುದ್ರದ ಅಲೆಗಳು ಹೊತ್ತೊಯ್ದಿವೆ. ಗ್ರಾಮದಲ್ಲಿ ಈಗ ನೀರವ ಮೌನ ಮಡುಗಟ್ಟಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ತಿಂಗಳ 25ರಂದು ಅವರೆಲ್ಲ ಹೊಸ ಬಟ್ಟೆ ಧರಿಸಿ ಮದುವೆ ಸಂಭ್ರಮದಲ್ಲಿ ಇರುತ್ತಿದ್ದರು. ಆದರೆ, ವಿಧಿ ಅವರನ್ನು ಸಾವಿನ ಮನೆಗೆ ತಳ್ಳಿದೆ. ಶನಿವಾರ ಸಂಜೆ ಎಲ್ಲರನ್ನು ಸಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಲೋಂಡಾ ಗ್ರಾಮದ ಕಿತ್ತೂರ ಕುಟುಂಬ ಗುರುವಾರ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಕುಡಾಳ ಪಟ್ಟಣಕ್ಕೆ ತೆರಳಿತ್ತು. ಕಿತ್ತೂರ ಕುಟುಂಬದ ಇಮ್ರಾನ್ ಮತ್ತು ಇರ್ಫಾನ್ ಸಹೋದರರು, ಅವರ ಪತ್ನಿಯರು, ಮಕ್ಕಳು ಹಾಗೂ ಇವರ ಜೊತೆ ಅಳ್ನಾವರದಲ್ಲಿರುವ ಸಹೋದರಿಯ ಮಗಳೂ ಕುಡಾಳಕ್ಕೆ ತೆರಳಿದ್ದರು. ಇಮ್ರಾನ್ ಲೋಂಡಾದಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಇರ್ಫಾನ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು.
ಕುಡಾಳದಲ್ಲಿರುವ ಮನಿಯಾರ್ ಕುಟುಂಬ ಇರ್ಫಾನ್ ಅವರ ಪತ್ನಿಯ ತವರಾಗಿದ್ದು, ಪತ್ನಿಯ ಸಹೋದರ ಫರಾನ್ ಮನಿಯಾರ್ ಅವರ ಮದುವೆ ನಿಗದಿಯಾಗಿತ್ತು. ಮದುವೆ ಸಿದ್ಧತೆಗಳ ಬಗ್ಗೆ ಪರಿಶೀಲಿಸಿ ಮದುವೆಯಲ್ಲಿ ಮಿಂಚಲು ಬಟ್ಟೆ-ಬರೆ ಖರೀದಿಸಲು ಹಾಗೂ ದಸರೆ ರಜೆಗಳನ್ನು ಕಳೆಯಲು ಮಕ್ಕಳ ಸಮೇತ ತೆರಳಿದ್ದರು.
ಇರ್ಫಾನ್ ಕಿತ್ತೂರ (36), ಅವರ ಪತ್ನಿ ಫರೀನ್ (34), ಮಗ ಇಬಾದ್ (13), ಇಮ್ರಾನ್ ಅವರ ಮಗ ಇಸ್ರಾರ್ (15), ಅಳ್ನಾವರದ ನಮೀರಾ (16) ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
'ಶಿರೋಡಾ ಸಮುದ್ರ ತೀರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಮತ್ತು ಘಟನಾ ಸ್ಥಳದಲ್ಲಿ ಪೊಲೀಸ್ ಹಾಗೂ ನೌಕಾದಳದ ಬಂದೋಬಸ್ತ್ ಇಲ್ಲದ ಕಾರಣ ಈ ದುರ್ಘಟನೆ ನಡೆದಿದೆ’ ಎಂದು ಇಮ್ರಾನ್ ಕಿತ್ತೂರ ಆರೋಪಿಸಿದ್ದಾರೆ.
ಹೇಗಾಯಿತು ಘಟನೆ?
ಶುಕ್ರವಾರ ಮಧ್ಯಾಹ್ನ ಮನಿಯಾರ ಹಾಗೂ ಕಿತ್ತೂರ ಕುಟುಂಬದ 9 ಸದಸ್ಯರು ಊಟ ಮಾಡಿ ಸಂಜೆ 4ಕ್ಕೆ ಸಮುದ್ರತೀರಕ್ಕೆ ತೆರಳಿದ್ದರು. ಇಸ್ರಾ ಎಂಬ ಬಾಲಕಿ ಸಮುದ್ರಕೆ ಇಳಿದವರೆಲ್ಲರ ಬಟ್ಟೆಗಳು ಬ್ಯಾಗ್ ಮತ್ತು ಮೊಬೈಲುಗಳನ್ನು ಕಾಯಲು ಸಮುದ್ರತೀರದಲ್ಲಿ ಕುಳಿತಿದ್ದಳು. ಏಕಾಏಕಿ ಬಂದ ದೊಡ್ಡ ಅಲೆಯೊಂದು ಎಲ್ಲರನ್ನೂ ಎಳೆದುಕೊಂಡು ಹೋಯಿತು. ಇದನ್ನು ಗಮನಿಸಿದ ಇಸ್ರಾ ಜೋರು ದನಿಯಲ್ಲಿ ಅಕ್ಕಪಕ್ಕದವರ ಗಮನ ಸೆಳೆದಳು. ಇಮ್ರಾನ್ ಎಲ್ಲರಿಗಿಂತ ಹಿಂದೆ ಇದ್ದಿದ್ದರಿಂದ ತಡ ಸೇರಿದ್ದರು. ಕ್ಷಣಾರ್ಧದಲ್ಲಿ ಎಲ್ಲ ಏಳೂ ಮಂದಿ ಕಣ್ಮರೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.