ADVERTISEMENT

ಚಿಕ್ಕೋಡಿ: ನಲುಗಿದ ನರ್ಸರಿ ಬೆಳೆಗಾರರು, ನೆರವಿಗೆ ಸರ್ಕಾರಕ್ಕೆ ಮೊರೆ‌

ಬಾಡುತ್ತಿರುವ ತರಕಾರಿ ಸಸಿಗಳು

ಸುಧಾಕರ ಎಸ್.ತಳವಾರ, ಬೆಂಗಳೂರು
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡ ಗ್ರಾಮದ ಕೃಷಿಕರು ಮಾರಾಟವಾಗದೇ ಉಳಿದಿರುವ ಈರುಳ್ಳಿ ಸಸಿಗಳನ್ನು ನಾಶಪಡಿಸಿದರು
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡ ಗ್ರಾಮದ ಕೃಷಿಕರು ಮಾರಾಟವಾಗದೇ ಉಳಿದಿರುವ ಈರುಳ್ಳಿ ಸಸಿಗಳನ್ನು ನಾಶಪಡಿಸಿದರು   

ಚಿಕ್ಕೋಡಿ: ತರಕಾರಿ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಿ ಬರುವ ಆದಾಯದಿಂದ ಜೀವನ ನಡೆಸುತ್ತಿದ್ದ ತಾಲ್ಲೂಕಿನ ಕೃಷಿಕರು ಲಾಕ್‌ ಡೌನ್‌ನಿಂದ ನಲುಗಿದ್ದು, ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ತಾಲ್ಲೂಕಿನ ಬೆಳಕೂಡ ಗೇಟ್, ಬೆಳಕೂಡ ಗ್ರಾಮಗಳ ರೈತರು ನರ್ಸರಿ ಕೃಷಿಯನ್ನೇ ನೆಚ್ಚಿಕೊಂಡಿದ್ದು, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಬದನೆ, ಎಲೆಕೋಸು, ಹೂಕೋಸು ಮೊದಲಾದ ಸಸಿಗಳನ್ನು ಬೆಳೆಸಿ ಚಿಕ್ಕೋಡಿ ತಾಲ್ಲೂಕಿನ ವಿವಿಧ ಮಾರುಕಟ್ಟೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರದ ಗಡಹಿಂಗ್ಲಜ್, ಕೊಲ್ಹಾಪುರ ಪಟ್ಟಣಗಳಿಗೂ ಹೋಗಿ ಸಸಿಗಳನ್ನು ರೈತರಿಗೆ ಮಾರಾಟ ಮಾಡುತ್ತಾರೆ.

ಎರಡು ವಾರಗಳಿಂದ ದೇಶದಲ್ಲಿ ಕೊರೊನಾ ಭೀತಿಯಿಂದ ಮಾರುಕಟ್ಟೆಗಳು ಬಂದ್ ಆಗಿವೆ. ಇದರಿಂದ ತಾಲ್ಲೂಕಿನ ರೈತರು ಬೆಳೆದಿರುವ ವಿವಿಧ ತರಕಾರಿ ಸಸಿಗಳು ಹೊಲಗಳಲ್ಲೇ ಬೆಳೆದು ಗಿಡಗಳಾಗುತ್ತಿವೆ. ಮಾರುಕಟ್ಟೆಗೆ ಸಾಗಣೆ ಮಾಡಲು ಆಗದ ಸ್ಥಿತಿಯಲ್ಲಿ ರೈತರಿದ್ದಾರೆ.

ADVERTISEMENT

'70 ಸಾವಿರ ಸಾಲ ಮಾಡಿ ಈರುಳ್ಳಿ ಸಸಿ ಬೆಳೆಸಿದ್ದೇನೆ. ಸಸಿಗಳು ಮಾರಾಟಕ್ಕೆ ಬಂದಿವೆ. ಆದರೆ, ಮಾರುಕಟ್ಟೆಗಳು ಬಂದ್ ಆಗಿವೆ. ಪ್ರತಿನಿತ್ಯ 6 ಸಾವಿರದಿಂದ 7 ಸಾವಿರ ಕಟ್ಟುಗಳನ್ನು ಚಿಕ್ಕೋಡಿ, ನಿಪ್ಪಾಣಿ, ಗಡಹಿಂಗ್ಲಜ್, ಕೊಲ್ಹಾಪುರಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವು. ಕನಿಷ್ಠ 2.5 ರಿಂದ 3 ಲಕ್ಷ ಆದಾಯ ಬರುತ್ತಿತ್ತು. ಆದರೆ, ಸಸಿಗಳ ಅವಧಿ ಮೀರಿದ್ದು, ಮಾರಾಟಕ್ಕೆ ಯೋಗ್ಯವಾಗಿಲ್ಲ‘ ಎಂದು ಕೃಷಿಕ ಆನಂದ ಪಾಶ್ಚಾಪುರೆ ಅಳಲು ತೋಡಿಕೊಂಡರು.

‘ಸರ್ಕಾರ ಕೇವಲ ಪಡಿತರ ಧಾನ್ಯ ನೀಡಿದರೆ ಸಾಲದು. ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು‘ ಎಂದು ರೈತ ರಮೇಶ ಡಬ್ಬನ್ನವರ ಆಗ್ರಹಿಸುತ್ತಾರೆ.

*
ದಿಕ್ಕು ತೋಚದಂತಾಗಿದೆ. ಅವಧಿ ಮೀರಿದ ಸಸಿಗಳನ್ನು ನಾಶಪಡಿಸುತ್ತಿದ್ದೇವೆ. ಸರ್ಕಾರ ನೆರವಿಗೆ ಬರಬೇಕು
-ಮಲ್ಲಪ್ಪ ದೊಡಮನಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.