ADVERTISEMENT

ಸೂಟ್‌ಕೇಸ್‌, ಬೆಡ್‌ ತಂದರೆ ಬೆಳಗಾವಿಯವರಾಗುವುದಿಲ್ಲ: ಶೆಟ್ಟರ್‌ಗೆ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 15:46 IST
Last Updated 18 ಏಪ್ರಿಲ್ 2024, 15:46 IST
ರಾಮದುರ್ಗ ತಾಲ್ಲೂಕಿನ ಮುದೇನೂರಿನಲ್ಲಿ ಲೋಕಸಭೆ ಅಭ್ಯರ್ಥಿ ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ ಪರ ಪ್ರಚಾರಕ್ಕೆ ಅಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆ ತಂದರು
ರಾಮದುರ್ಗ ತಾಲ್ಲೂಕಿನ ಮುದೇನೂರಿನಲ್ಲಿ ಲೋಕಸಭೆ ಅಭ್ಯರ್ಥಿ ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ ಪರ ಪ್ರಚಾರಕ್ಕೆ ಅಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆ ತಂದರು    

ರಾಮದುರ್ಗ: ‘ಒಂದು ಸೂಟ್‌ಕೇಸ್‌, ಒಂದು ಬೆಡ್‌ ತಂದರೆ ಬೆಳಗಾವಿಯವರಾಗುವುದಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದಿದ್ದರೆ ಮಾತ್ರ ಬೆಳಗಾವಿಯವರು ಎಂದರೆ ಕೇಳಬಹುದು. ಬಾಡಿಗೆ ಮನೆ ಹಿಡಿದಿರುವ ಶೆಟ್ಟರ್‌ ಲೋಕಸಭೆಯ ಚುನಾವಣೆ ಮುಗಿಯುವರೆಗೆ ಮಾತ್ರ ಇರುತ್ತಾರೆ ಎಂಬುದನ್ನು ಮತದಾರರ ಅರಿತುಕೊಳ್ಳಬೇಕು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಮುದೇನೂರು ಮತ್ತು ಬಟಕುರ್ಕಿಯಲ್ಲಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಪ್ರಚಾರ ನಡೆಸಿದ ಅವರು, ‘ಬೆಳಗಾವಿಯ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಹುಬ್ಬಳ್ಳಿಗೆ ಕೊಂಡೊಯ್ದ ಬಿಜೆಪಿಯ ಜಗದೀಶ ಶೆಟ್ಟರ್ ಅವರನ್ನು ಸೋಲಿಸಬೇಕು. ಯುವಕನಾಗಿರುವ ಮೃಣಾಲ್‌ ಹೆಬ್ಬಾಳಕರನಿಗೆ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

‘ಆರು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಗಳಾಗಿ, ವಿರೋಧ ಪಕ್ಷದ ನಾಯಕರಾಗಿ, ಬಿಜೆಪಿಯ ಮುಖ್ಯಮಂತ್ರಿಯಾಗಿದ್ದವರು ತಮಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 9 ತಿಂಗಳ ನಂತರ ಮತ್ತೇ ಬಿಜೆಪಿಗೆ ಸೇರ್ಪಡೆಗೊಂಡು ಬೆಳಗಾವಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅವರು ಅಧಿಕಾರದ ಆಸೆಯನ್ನು ಎತ್ತಿ ತೋರುತ್ತದೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿಗರು ಹೇಳುವ ಸುಳ್ಳುಗಳನ್ನು ನಂಬಬೇಡಿ, ಲೋಕಸಭೆ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ನಿಂತು ಹೋಗುತ್ತವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಮುಂದಿನ ನಾಲ್ಕು ವರ್ಷಗಳವರೆಗೂ ಐದೂ ಗ್ಯಾರಂಟಿಗಳು ನಿರಂತರವಾಗಿ ಮುಂದುವರೆಯಲಿವೆ’ ಎಂದು ಹೇಳಿದರು.

‘ನನ್ನ ಮಗ ಯುವಕನಿದ್ದಾನೆ. ಸಿವಿಲ್‌ ಇಂಜಿನಿಯರ್‌ ಆಗಿದ್ದಾನೆ. ಬಡವರ ಕಷ್ಟ ಅರಿತಿರುವ ಅವರು ಕಾಂಗ್ರೆಸ್‌ ಪಕ್ಷದಲ್ಲಿ ನಿರಂತರ ಸೇವೆ ಮಾಡಿ ಪಕ್ಷ ಕಟ್ಟುತ್ತಿದ್ದಾನೆ. ಈ ಚುನಾವಣೆ ಬೆಳಗಾವಿಯ ಸ್ವಾಭಿಮಾನದ ಪ್ರಶ್ನೆಯಾಗಿದೆ. ಹೊರಗಿನವರಿಗೆ ಅವಕಾಶ ನೀಡದೇ ಜಿಲ್ಲೆಯ ಮಗನಾದ ಮೃಣಾಲ್‌ನಿಗೆ ಗೆಲ್ಲಿಸಿ ಕೇಂದ್ರದ ಅನುದಾನವನ್ನು ತರಲು ಅವಕಾಶ ನೀಡಬೇಕು’ ಎಂದು ಬೇಡಿಕೊಂಡರು.

ಬಸನಗೌಡ ಪ್ಯಾಟಿಗೌಡರ, ರಾಮಣ್ಣ ಬೀಡಕಿ, ರಾಜೇಂದ್ರ ಪಾಟೀಲ, ನಿಜಗುಲಿ, ಜಿ.ಬಿ ರಂಗನಗೌಡರ, ಸುರೇಶ ಪತ್ತೇಪೂರ, ಸೋಮಶೇಖರ ಸಿದ್ಲಿಂಗಪ್ಪನವರ ಸೇರಿದಂತೆ ಅನೇಕರು ಸಚಿವರಿಗೆ ಸಾಥ್‌ ನೀಡಿದರು.

ಮುದೇನೂರು ಮತ್ತು ಬಟಕುರ್ಕಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರಗೆ ಸಾರ್ವಜನಿಕರು ಪುಷ್ಪವೃಷ್ಟಿ ಸುರಿಸಿ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.