ADVERTISEMENT

ಜನರಿಗೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:25 IST
Last Updated 20 ನವೆಂಬರ್ 2019, 16:25 IST
ಅಥಣಿಯಲ್ಲಿ ಶಾಸಕ ಎಂ.ಬಿ. ಪಾಟೀಲ ಮುಖಂಡರೊಂದಿಗೆ ಬುಧವಾರ ಚರ್ಚಿಸಿದರು
ಅಥಣಿಯಲ್ಲಿ ಶಾಸಕ ಎಂ.ಬಿ. ಪಾಟೀಲ ಮುಖಂಡರೊಂದಿಗೆ ಬುಧವಾರ ಚರ್ಚಿಸಿದರು   

ಅಥಣಿ: ‘ನೆರೆ ಬಂದಾಗ ಸಂತ್ರಸ್ತರ ಸಂಕಷ್ಟಗಳ ಪರಿಹಾರಕ್ಕೆ ಸ್ಪಂದಿಸದೇ ವೈಯಕ್ತಿಕ ಅಭಿವೃದ್ಧಿಗಾಗಿ ಮುಂಬೈನಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದ, ಈಗ ಅನರ್ಹ ಶಾಸಕರಾಗಿರುವ ಮಹೇಶ ಕುಮಠಳ್ಳಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ, ಚುನಾವಣಾ ಉಸ್ತುವಾರಿ ಎಂ.ಬಿ. ಪಾಟೀಲ ಹೇಳಿದರು.

ಇಲ್ಲಿ ಮುಖಂಡ ಅನೀಲ ಸುಣಧೋಳಿ ಅವರ ಮನೆಗೆ ಬುಧವಾರ ಬಂದಿದ್ದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಥಣಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದರೂ, ತಾರತಮ್ಯವಾಗಿದೆ ಎಂದು ಆರೋಪಿಸಿ ಪಕ್ಷಕ್ಕೆ ದ್ರೋಹ ಮಾಡಿ ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಗೆಲ್ಲಿಸಿ ಶಾಸಕರನ್ನಾಗಿಸಿದ ಮುಖಂಡರು, ಕಾರ್ಯಕರ್ತರ ಕೂಗನ್ನೂ ಸಹ ಕೇಳದೇ ಪಕ್ಷಾಂತರ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಕೆರೆ ತುಂಬಿಸುವ ಯೋಜನೆಗೆ ಎಂ.ಬಿ. ಪಾಟೀಲರು ಅನುದಾನ ನೀಡಿದ್ದಾರೆ ಎಂದು ಹಲವು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಈಗ, ಅನುದಾನ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಾನು ದಾಖಲೆ ಸಮೇತ ಉತ್ತರ ನೀಡಿ ಅವರಿಗೆ ಕ್ಷೇತ್ರದಲ್ಲಿ ಮುಖಭಂಗವಾಗುವಂತೆ ಮಾಡುತ್ತೇನೆ’ ಎಂದು ತಿಳಿಸಿದರು.

‘ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವರು ಅಥಣಿಗೆ ಬಂದು ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಾರೆ. ಲಕ್ಷ್ಮಿ ಹೆಬ್ಬಾಳಕರ, ಆರ್.ಬಿ. ತಿಮ್ಮಾಪೂರ ಹಾಗೂ ನಾನು ಚುನಾವಣೆ ಮುಗಿಯುವರೆಗೆ ಇಲ್ಲಿಯೇ ಇದ್ದು, ಅಭ್ಯರ್ಥಿ ಗಜಾನನ ಮಂಗಸೂಳಿ ಗೆಲುವಿಗೆ ಶ್ರಮಿಸುತ್ತೇವೆ’ ಎಂದರು.

‘ಪ್ರತಿ ಜಿಲ್ಲಾ, ತಾಲ್ಲೂಕು ಹಾಗೂ ಪಟ್ಟಣ ಪಂಚಾಯಿತಿಗಳ ಕ್ಷೇತ್ರವಾರು ಪ್ರಚಾರಕ್ಕಾಗಿ ಪ್ರಮುಖ ಮುಖಂಡರನ್ನು ನೇಮಿಸಲಾಗಿದೆ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ. ಇಲ್ಲವಾದಲ್ಲಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅಭ್ಯರ್ಥಿ ಗಜಾನನ ಮಂಗಸೂಳಿ, ಮುಖಂಡರಾದ ಆರ್‌.ಬಿ. ತಿಮ್ಮಾಪೂರ, ಲಕ್ಷ್ಮಣರಾವ ಚಿಂಗಳೆ, ಧರೆಪ್ಪ ಠಕ್ಕನ್ನವರ, ಸುನೀಲ ಸಂಕ, ಶ್ರೀಕಾಂತ ಪೂಜಾರಿ, ರೇಖಾ ಪಾಟೀಲ, ನಿಶಾಂತ ದಳವಾಯಿ, ತೌಸಿಫ್ ಸಾಂಗಲೀಕರ, ಬಸವರಾಜ ಬಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.