ADVERTISEMENT

ಮಕ್ಕಳನ್ನು ಕಾಡುತ್ತಿದೆ ‘ಮದ್ರಾಸ್‌ ಕಣ್ಣು’: ವೈದ್ಯರ ಸಲಹೆಗಳು ಇಲ್ಲಿವೆ

ನೇತ್ರ ರೋಗಿಗಳಲ್ಲಿ ಶೇ 70ರಷ್ಟು ಮಂದಿಗೆ ವೈರಾಣು ಸೋಂಕು, ಶೇ 30ರಷ್ಟು ಹೆಚ್ಚಿದ ಸೋಂಕಿನ ಪ್ರಮಾಣ

ಸಂತೋಷ ಈ.ಚಿನಗುಡಿ
Published 7 ಆಗಸ್ಟ್ 2023, 5:44 IST
Last Updated 7 ಆಗಸ್ಟ್ 2023, 5:44 IST
‘ಮದ್ರಾಸ್‌ ಐ’
‘ಮದ್ರಾಸ್‌ ಐ’    

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕಣ್ಣುಬೇನೆ ಹೆಚ್ಚಾಗಿ ಕಾಡುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಕಣ್ಣಿನ ಆಸ್ಪತ್ರೆಗಳಲ್ಲಿ ಶೇ 30ರಷ್ಟು ಕಣ್ಣುಬೇನೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವಯಸ್ಕರು, ವೃದ್ಧರಿಗಿಂತ ಹೆಚ್ಚಾಗಿ ಈ ನೋವು ಶಾಲೆ– ಕಾಲೇಜು ಮಕ್ಕಳನ್ನು ಕಾಡುತ್ತಿದೆ.

ಆಡುಭಾಷೆಯಲ್ಲಿ ‘ಮದ್ರಾಸ್‌ ಐ’ ಎಂದು ಹೇಳುವ ಈ ಕಣ್ಣುಬೇನೆ ಸಾಂಕ್ರಾಮಿಕವಾಗಿ ಹರಡುತ್ತಿದೆ. ಈ ಬೇನೆಯಿಂದಾಗಿ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದರಿಂದ ‘ಪಿಂಕ್‌ ಐ’ ಎಂದೂ ಹೇಳಲಾಗುತ್ತದೆ. ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಜಿಲ್ಲೆಯ ಬಹಳಷ್ಟು ಜನರಲ್ಲಿ ಕಣ್ಣು ನೋವು ಕಾಣಿಸಿಕೊಂಡಿದೆ. ಇದು ವೈರಾಣು ಸೋಂಕು. ಆದ್ದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತಿದೆ.

ಕಣ್ಣುಗಳು ಕೆಂಪಾಗುವುದು, ಕಣ್ಣುಗಳಲ್ಲಿ ಪಿಚ್ಚು ಸೋರುವುದು, ಪದೇಪದೇ ನೀರು ಸೋರುವುದು, ಕಣ್ಣಿನ ರೆಪ್ಪೆಗಳು ಅಂಟಿಕೊಳ್ಳುವುದು, ನೋವು, ತುರಿಕೆ ಮತ್ತು ಕಣ್ಣಿನ ರೆಪ್ಪೆಗಳ ಬಾವು ಬರುವುದು ಮುಂತಾದ ಸಮಸ್ಯೆಗಳು ಇದರಿಂದ ಉಂಟಾಗುತ್ತಿವೆ.

ADVERTISEMENT

ಹರಡುವುದು ಹೇಗೆ?: ಈ ಸೋಂಕು ತಗಲಿದ ವ್ಯಕ್ತಿಯ ಕಣ್ಣುಗಳನ್ನು ನೋಡಿದರೂ ಸಾಕು ತಮಗೂ ಹರಡುತ್ತದೆ ಎಂಬ ಭಾವನೆ ಇದೆ. ಆದರೆ, ಇದು ತಪ್ಪು. ಸೋಂಕಿತ ವ್ಯಕ್ತಿ ಬಳಸಿದ ಸಾಮಗ್ರಿಗಳನ್ನು ಬೇರೆಯವರು ಬಳಸಿದರೆ ಸೋಂಕು ತಗಲುತ್ತದೆ. ಎಚ್ಚರ ವಹಿಸಿದರೆ ಹರಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ನೇತ್ರ ತಜ್ಞರು.

ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಅವರೊಂದಿಗೆ ಬೆರೆಯುವ ಎಲ್ಲರಿಗೂ ಬರುವುದು ಸಹಜ. ಹೀಗಾಗಿ, ಯಾರಿಗೆ ಸೋಂಕು ಅಂಟಿಕೊಳ್ಳುವುದೋ ಅವರು ನಾಲ್ಕೈದು ದಿನ ಕ್ವಾರಂಟೈನ್‌ ಆಗುವುದು ಅತ್ಯವಶ್ಯ. ಸೋಂಕಿತರಿಗೆ ಪ್ರತ್ಯೇಕ ಕೋಣೆ, ಟವಲ್‌, ಬಟ್ಟೆ, ತಟ್ಟೆ, ಸಾಬೂನು, ಟೂತ್‌ಪೇಸ್ಟ್‌ ಹೀಗೆ ಎಲ್ಲವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮನೆಯ ಎಲ್ಲ ಸದಸ್ಯರಿಗೂ ಸೋಂಕು ತಗಲುತ್ತದೆ.

ಶೇ 70ರಷ್ಟು ಇದೇ ಪ್ರಕರಣ: ಇಲ್ಲಿನ ಜಿಲ್ಲಾಸ್ಪತ್ರೆ, ಕೆಎಲ್‌ಇ ಆಸ್ಪತ್ರೆ ಹಾಗೂ ಇತರ ನೇತ್ರ ತಪಾಸಣಾ ಕ್ಲಿನಿಕ್‌ಗಳಿಗೆ ತಪಾಸಣೆಗೆ ಬರುವವರಲ್ಲಿ ಶೇ 70ರಷ್ಟು ಮಂದಿ ಇದೇ ಸೋಂಕಿಗೆ ಒಳಗಾಗಿದ್ದಾರೆ ಎನ್ನುತ್ತಾರೆ ಖಾಸಗಿ ವೈದ್ಯರು.

ಅಪಾಯಕಾರಿ ಅಲ್ಲ: ‘ಮದ್ರಾಸ್‌ ಐ’ನಿಂದ ಪ್ರಾಣಕ್ಕೆ ಅಥವಾ ದೃಷ್ಟಿಗೆ ಅಪಾಯ ಇಲ್ಲ. ಶೇ 99ರಷ್ಟು ಪ್ರಕರಣಗಳು ಸುಲಭವಾಗಿಯೇ ಪರಿಹಾರ ಆಗುತ್ತವೆ. ಆ್ಯಂಟಿಬಯಾಟಿಕ್‌ ಮೂಲಕ ಈ ಸಮಸ್ಯೆ ಬಗೆಹರಿಸಲಾಗುತ್ತದೆ. ಜಿಲ್ಲೆ ಮಾತ್ರವಲ್ಲ; ರಾಜ್ಯದಲ್ಲಿ ಇದೂವರೆಗೆ ಅಪಾಯ ಒದಗಿದ ಪ್ರಕರಣ ಪತ್ತೆಯಾಗಿಲ್ಲ. ನೂರಕ್ಕೆ ಒಬ್ಬರಿಗೆ; ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ದೃಷ್ಟಿ ದೋಷ ಉಂಟಾಗಬಹುದು. ಮಕ್ಕಳ ಕಣ್ಣುಗಳಲ್ಲಿ ಹೆಚ್ಚು ತೀಕ್ಷ್ಣತೆ ಇರುತ್ತದೆ. ನರಗಳು ಕ್ರಿಯಾಶೀಲವಾಗಿರುತ್ತವೆ. ಆದ್ದರಿಂದ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ. ಈ ಬಗ್ಗೆ ಊಹಾ‍ಪೋಹಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣೆ ಹೇಳುತ್ತಾರೆ.

‘ಮದ್ರಾಸ್‌ ಐ’ ಪೀಡಿತ ಕಣ್ಣು
ಡಾ.ಮಹೇಶ ಕೋಣೆ
‘ಮದ್ರಾಸ್‌ ಐ’ ಕುರಿತು ಅರಿವು ಮೂಡಿಸಲು ಸಿದ್ಧಗೊಂಡ ಸಿಬ್ಬಂದಿಗೆ ಬೆಳಗಾವಿಯಲ್ಲಿ ಈಚೆಗೆ ಮಾಹಿತಿ ನೀಡಲಾಯಿತು

ವೈದ್ಯರ ಸಲಹೆ

* ಕಣ್ಣು ನೋವು ಕಾಣಿಸಿಕೊಂಡವರು ಪದೇಪದೇ ಕಣ್ಣು ಮತ್ತು ಮುಖ ಉಜ್ಜಬಾರದು ಮುಟ್ಟಿಕೊಳ್ಳಬಾರದು.

* ಮೇಲಿಂದ ಮೇಲೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು.

* ಸೋಂಕಿನ ಸಮಯದಲ್ಲಿ ಕಣ್ಣಿಗೆ ಕಾಡಿಗೆ ಬಳಸಬಾರದು.

* ಸೋಂಕು ಅಂಟಿಕೊಂಡ ಸಮಯದಲ್ಲಿ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸಬಾರದು. ಕನ್ನಡಕ ಹಾಕಬಹುದು.

* ಸೋಂಕಿಗೆ ಒಳಗಾದವರ ಟವೆಲ್‌ ಹೆಲ್ಮೆಟ್‌ ಸೋ‍ಪು ಯಾವುದೇ ವೈಯಕ್ತಿಕ ವಸ್ತುಗಳನ್ನು ಬೇರೆಯವರು ಬಳಸಬಾರದು.

* ಹೊರಗಡೆ ಹೋಗುವುದು ತೀರ ಅನಿವಾರ್ಯವಾದರೆ ಕಣ್ಣುಗಳು ಮುಚ್ಚಿಕೊಳ್ಳುವಂಥ ಕೂಲಿಂಗ್‌ ಗ್ಲಾಸ್‌ ಬಳಸಬೇಕು.

* ಸೋಂಕು ಬಂದಾಗ ಕ್ವಾರಂಟೈನ್‌ ಆಗಬೇಕು. ವಿಶ್ರಾಂತಿ ತೆಗೆದುಕೊಳ್ಳಬೇಕು. ಸಮತೋಲನ ಆಹಾರ ಸೇವಿಸಬೇಕು.

ಶಾಲೆ ಕಾಲೇಜು ಹಾಸ್ಟೆಲ್‌ನಲ್ಲೇ ಹೆಚ್ಚು ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೊದಲ ‘ಮದ್ರಾಸ್‌ ಐ’ ಸೋಂಕು ಕಾಣಿಸಿಕೊಂಡಿತು. ಆ ಶಾಲೆಯ 30ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು  ಹರಡಿತು. ಅಲ್ಲಿಂದ ಬೇರೆಬೇರೆ ಶಾಲೆ ಕಾಲೇಜು ವಸತಿ ಶಾಲೆ ಹಾಸ್ಟೆಲ್‌ ಹೀಗೆ ಹೆಚ್ಚು ಸಂದಣಿ ಇರುವ ಕಡೆಗಳಲ್ಲಿ ಹೆಚ್ಚುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ. ಶಾಲೆ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಕಣ್ಣು ನೋವು ಕಾಣಿಸಿಕೊಂಡರೆ ಶಾಲೆಗೆ ಹೋಗದೇ ಮನೆಯಲ್ಲೇ ಇರುವಂತೆ ಸೂಚಿಸಲಾಗುತ್ತಿದೆ. ಚಿಕ್ಕಮಕ್ಕಳು ಒಬ್ಬರಿಗೊಬ್ಬರು ಜೊತೆಯಾಗೇ ಓಡಾಡುವುದರಿಂದ ಸೋಂಕು ಸುಲಭವಾಗಿ ಹರಡುತ್ತದೆ. ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎನ್ನುತ್ತಾರೆ ಅವರು.

ಇವರೇನಂತಾರೆ ಭಯ ಪಡಬೇಕಾಗಿಲ್ಲ ಜಿಲ್ಲೆಯಲ್ಲಿ ಏಕಾಏಕಿ ಮಳೆ ಆರಂಭವಾಗಿದ್ದರಿಂದ ಶೀತ ವಾತಾವರಣ ನಿರ್ಮಾಣವಾಯಿತು. ಈ ರೀತಿಯ ವಾತಾವರಣದಲ್ಲಿ ‘ಮದ್ರಾಸ್‌ ಐ’ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಹಾಗಾಗಿ ಎರಡೇ ವಾರದಲ್ಲಿ ಹೆಚ್ಚು ಜನರಿಗೆ ತಗಲಿದೆ. ನಿಯಂತ್ರಣ ಹಾಗೂ ಜಾಗೃತಿ ಕ್ರಮಗಳು ನಿರಂತರ ಸಾಗಿವೆ. ಜನ ಭಯಪಡುವ ಅಗತ್ಯವಿಲ್ಲ. –ಡಾ.ಮಹೇಶ ಕೋಣೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಗನನ್ನು ಶಾಲೆಗೆ ಕಳಿಸಿಲ್ಲ ನನ್ನ ಎರಡನೇ ಮಗ 9ನೇ ತರಗತಿ ಓದುತ್ತಿದ್ದಾನೆ. ನಗರದ ಖಾಸಗಿ ಶಾಲೆಯೊಂದರಲ್ಲಿ ‘ಮದ್ರಾಸ್‌ ಐ’ ಕಾಣಿಸಿಕೊಂಡಿದ್ದರಿಂದ ಶಾಲೆ ಬಿಡಿಸಿದ್ದೇನೆ. ಮೇಲಿಂದ ಮೇಲೆ ಕಣ್ಣು ತೊಳೆದುಕೊಳ್ಳುವುದು ಮಳೆ– ಗಾಳಿಗೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ. ಈಗ ನೋವು ಕಡಿಮೆಯಾಗುತ್ತಿದೆ. –ವಿಶಾಲಾಕ್ಷಿ ಬಡಕಲು ಸದಾಶಿವ ನಗರ ನಿವಾಸಿ ನಿಖರ ವೈರಸ್‌ ಪತ್ತೆಯಾಗಿಲ್ಲ ‘ಮದ್ರಾಸ್‌ ಐ’ ಸೋಂಕು ಇಂಥದ್ದೇ ವೈರಸ್‌ನಿಂದ ಬರುತ್ತದೆ ಎಂಬುದು ದೃಢಪಟ್ಟಿಲ್ಲ. ಇದು ವೈರಾಣು ಹಾಗೂ ಬ್ಯಾಕ್ಟಿರಿಯಾ ಮಿಶ್ರಿತ ತಳಿಯಾಗಿರಬಹುದು. ಕೆಎಲ್‌ಇ ಆಸ್ಪತ್ರೆಯಲ್ಲಿ ಕೂಡ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿದೆ. ಇದು ಅಪಾಯಕಾರಿ ಸೋಂಕು ಅಲ್ಲ. ಸೂಕ್ತ ಚಿಕಿತ್ಸೆ ಪಡೆದರೆ ಸಾಕು. –ಡಾ.ಶಿವಾನಂದ ಬುಬನಾಳೆ ನೇತ್ರತಜ್ಞ ಕೆಎಲ್‌ಇ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.