ADVERTISEMENT

ಚಿಕ್ಕೋಡಿ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಗ್ರಹಣ

ಮಳೆಯಿಂದ ಜಲಾವೃತಗೊಂಡ ಕಾಮಗಾರಿ ಸ್ಥಳ: ಜಾಕ್‌ವೆಲ್‌ ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 2:47 IST
Last Updated 11 ಜುಲೈ 2025, 2:47 IST
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ ನಿರ್ಮಾಣವಾಗುತ್ತಿರುವ ಜಾಕವೆಲ್ ಕಾಮಗಾರಿ ಸ್ಥಳ ನದಿ ನೀರಿನಿಂದ ಆವರಿಸಿದೆ
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ ನಿರ್ಮಾಣವಾಗುತ್ತಿರುವ ಜಾಕವೆಲ್ ಕಾಮಗಾರಿ ಸ್ಥಳ ನದಿ ನೀರಿನಿಂದ ಆವರಿಸಿದೆ   

ಚಿಕ್ಕೋಡಿ: ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯ 19 ಗ್ರಾಮಗಳ ಸಹಸ್ರಾರು ಎಕರೆ ಜಮೀನಿಗೆ ನೀರು ಒದಗಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯು ಮಹಾ ಮಳೆಯ ಪರಿಣಾಮವಾಗಿ ಮೊದಲನೇ ಹಂತದ ಕಾಮಗಾರಿಗೆ ಗ್ರಹಣ ಹಿಡಿದಿದೆ.

ಪ್ರತಿವರ್ಷಕ್ಕಿಂತ ಈ ಭಾರಿ ಮಳೆಯು ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿದ್ದರಿಂದ ನದಿ ನೀರು ಜಾಕವೆಲ್ ನಿರ್ಮಾಣ ಸ್ಥಳದಲ್ಲಿ ನಿಂತು ಕಾಮಗಾರಿಗೆ ತೊಂದರೆಯಾಗಿದೆ.

2021-22ನೇ ಸಾಲಿನಲ್ಲಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ₹ 489.70 ಕೋಟಿ ಮೊತ್ತದ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದೆ.

ADVERTISEMENT

₹ 180.21 ಕೋಟಿ ಮೊತ್ತದಲ್ಲಿ ಕೈಗೊಂಡ ಮೊದಲ ಹಂತದ ಕಾಮಗಾರಿಯು ಫೆಬ್ರುವರಿ 21, 2024ರಂದು ಪ್ರಾರಂಭವಾಗಿದ್ದು, ಆಗಸ್ಟ್ 27, 20225ರಂದು ಪೂರ್ಣಗೊಳ್ಳಬೇಕಿತ್ತು. ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಾದ ಜಾಕ್‌ವೆಲ್ ಹಾಗೂ ಪೈಪಲೈನ್ ಕಾಮಗಾರಿ ವಿಳಂಬವಾಗಿದೆ.

ಈಗಾಗಲೇ ಮೊದಲನೇ ಹಂತದ ಅಡಿಯಲ್ಲಿ 21 ಕಿ.ಮೀ ಪೈಪಲೈನ್ ಮಾರ್ಗದ ಪೈಕಿ 6 ಕಿ.ಮೀ ಪೈಪಲೈನ್ ಜೋಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದಲ್ಲಿ ಇನ್ನೂ ₹ 179.3 ಕೋಟಿ ಮೊತ್ತ ಅವಶ್ಯಕತೆ ಇದೆ. ಈಗಾಗಲೇ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಮುಂಗಾರು ಮಳೆಯು ಈ ಬಾರಿ ಮೇ ತಿಂಗಳ ಮಧ್ಯದಲ್ಲಿಯೇ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲೂ ಕೂಡ ಕಳೆದ ಎರಡು ತಿಂಗಳಿನಿಂದ ಬಿಟ್ಟೂ ಬಿಡದೇ ಮಳೆ ಬೀಳುತ್ತಿರುವುದರ ಪರಿಣಾಮ ಕಾಮಗಾರಿ ಸ್ಥಳದಲ್ಲಿ ನೀರು ನಿಂತಿದೆ. ಒಂದು ತಿಂಗಳು ಮುಂಚೆಯೇ ಮಳೆ ಪ್ರಾರಂಭವಾಗಿದ್ದರಿಂದ ಜಾಕವೆಲ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಪರದಾಡುವಂತಾಗಿದೆ. ಶರವೇಗದಲ್ಲಿ ಕೈಗೊಂಡ ಜಾಕವೆಲ್ ನಿರ್ಮಾಣ ಕಾಮಗಾರಿಯು ಮಳೆಯ ಕಾರಣದಿಂದ ಏಕಾಏಕಿ ಸ್ಥಗಿತಗೊಂಡಿದೆ.

ಮಹಾಲಕ್ಷ್ಮೀ ಏತನೀರಾವರಿ ಯೋಜನೆಗೆ 0.92 ಟಿಎಂಸಿ ನೀರು ಬಳಸಿಕೊಂಡು ರಾಮಪೂರ, ಅಮಲಝರಿ, ಗವಾನ, ವಾಳಕಿ, ಪಟ್ಟಣಕುಡಿ, ಪೀರವಾಡಿ, ಯಾದ್ಯಾನವಾಡಿ, ನಾಗ್ಯಾನವಾಡಿ, ನಾಯಿಂಗ್ಲಜ, ಧುಳಗನವಾಡಿ, ನವಲಿಹಾಳ, ಕುಠಾಳಿ, ಕೋಥಳಿವಾಡಿ, ಕೋಥಳಿ, ಕುಪ್ಪಾನವಾಡಿ, ಹಂಡ್ಯಾನವಾಡಿ, ಚಿಂಚಣಿ, ಗಿರಗಾಂವ ಹಾಗೂ ಶಿರಗಾಂವ ಗ್ರಾಮಗಳ ವ್ಯಾಪ್ತಿಯ 7800 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ ನಿರ್ಮಾಣವಾಗುತ್ತಿರುವ ಜಾಕವೆಲ್ ಕಾಮಗಾರಿ ಸ್ಥಳ ನದಿ ನೀರಿನಿಂದ ಆವರಿಸಿದೆ
ಮಳೆ ನೀರು ಕಡಿಮೆಯಾದ ಮೇಲೆಯಾದರೂ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು
ರಾಜೇಂದ್ರ ಪಾಟೀಲ, ಶಿರಗಾಂವ ಗ್ರಾಮದ ರೈತ
ಮಳೆಯ ಪರಿಣಾಮವಾಗಿ ಜಾಕ್‌ವೆಲ್ ನಿರ್ಮಾಣದ ಸ್ಥಳದಲ್ಲಿ ನದಿ ನೀರು ಆವರಿಸಿಕೊಂಡಿದ್ದರಿಂದ ಗುತ್ತಿಗೆದಾರರಿಗೆ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ. ನದಿ ನೀರು ಇಳಿಮುಖವಾದ ಬಳಿಕ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ
ಎಸ್.ಎಸ್‌.ಕರಗಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.