
ಅಥಣಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರದವರಿಗೆ ಅದನ್ನು ಕೇಳುವ ಹಕ್ಕಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಇಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಎಂಇಎಸ್‌ನವರು ಹೋರಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸುವಂತೆ ಕೇಳುವ ಕಾಲ ಬರಬಹುದು’ ಎಂದು ಎಚ್ಚರಿಕೆ ಕೊಟ್ಟರು.
‘ಹೋರಾಟದ ಕಿಡಿ ಹೊತ್ತಿಸಿದ ನೆಲ ಬೆಳಗಾವಿ. ಬ್ರಿಟಿಷರಿಗೆ ಹೆದರದ ಬೆಳಗಾವಿ ಮಹಾರಾಷ್ಟ್ರದವರಿಗೆ ಹೆದರುತ್ತದೆಯೇ’ ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಸಿದ್ರಾಯ ಭೋಸಗಿ ಧ್ವಜಾರೋಹಣ ನೆರವೇರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ದಾರ್ಥ ಶಿಂಗೆ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಂಕ್ಕಚ್ಚಿ ಮಾತನಾಡಿದರು. ಪತ್ರಕರ್ತರಾದ ಜಬ್ಬಾರ್ ಚಿಂಚಲಿ, ಬಸವರಾಜ ಚಮಕೇರಿ ಸೇರಿ 20 ಸಾಧಕರಿಗೆ ತಾಲ್ಲೂಕುಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಆಶೋಕ ಗುಡಿಮನಿ, ಬಿಇಒ ಎಂ.ಆರ್.ಮುಂಜಿ, ದತ್ತಾ ವಾಸ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.