ADVERTISEMENT

ದಕ್ಷಿಣ ಮಹಾರಾಷ್ಟ್ರದ ಜಲಾಶಯಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 16:35 IST
Last Updated 5 ಆಗಸ್ಟ್ 2019, 16:35 IST

ಬೆಳಗಾವಿ: ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಅಲ್ಲಿನ ಎಲ್ಲ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಪ್ರಮುಖ ಜಲಾಶಯವಾಗಿರುವ ಕೊಯ್ನಾ ಶೇ 95ರಷ್ಟು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ 99.32 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸೋಮವಾರ 95,000 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ಕೃಷ್ಣಾ ನದಿಯ ಉಗಮಸ್ಥಳವಾಗಿರುವ ಮಹಾಬಳೇಶ್ವರ ಬೆಟ್ಟ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. 289 ಮಿ.ಮೀ ಮಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದುಬರುತ್ತಿದೆ.

ಕೊಲ್ಹಾಪುರ ಸುತ್ತಮುತ್ತಲೂ ಉತ್ತಮ ಮಳೆಯಾಗಿದೆ. ಇಲ್ಲಿನ ವಾರಣಾ ಜಲಾಶಯದಲ್ಲಿ 34.2 ಟಿಎಂಸಿ ಅಡಿ ಪೈಕಿ 33.88 ಟಿಎಂಸಿ ಅಡಿ (ಶೇ 98.49) ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕಣೇರ ಜಲಾಶಯದಲ್ಲಿ 10.10 ಟಿಎಂಸಿ ಅಡಿ ಪೈಕಿ 8.94 ಅಡಿ, ಧೂಮ್‌ ಜಲಾಶಯದಲ್ಲಿ 13.5 ಟಿಎಂಸಿ ಅಡಿ ಪೈಕಿ 12.27 ಟಿಎಂಸಿ ಅಡಿ ಭರ್ತಿಯಾಗಿದೆ.

ADVERTISEMENT

ದೂಧ್‌ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿರುವ ರಾಧಾನಗರಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. 8.34 ಟಿಎಂಸಿ ಅಡಿ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಾಳಮ್ಮವಾಡಿ ಜಲಾಶಯದಲ್ಲಿ 25.40 ಟಿಎಂಸಿ ಅಡಿ ಪೈಕಿ 21.08 ಟಿಎಂಸಿ ಅಡಿ (ಶೇ 83) ಭರ್ತಿಯಾಗಿದೆ. ಹೆಚ್ಚುವರಿ ನೀರು ದೂಧ್‌ಗಂಗಾ ಸೇರಿಕೊಳ್ಳುತ್ತಿದೆ. ಚಿಕ್ಕೋಡಿಯ ಕಲ್ಲೋಳ ಬಳಿ ದೂಧ್‌ಗಂಗಾ ನದಿಯು ಕೃಷ್ಣಾದಲ್ಲಿ ಸಂಗಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.