ADVERTISEMENT

ಮಕ್ಕಳಿಗಾಗಿ ಐಸೊಲೇಷನ್‌ ಕೇಂದ್ರ

ಬೆಳಗಾವಿ ಮಹೇಶ್ ಪ್ರತಿಷ್ಠಾನದಿಂದ ಉಪಕ್ರಮ

ಎಂ.ಮಹೇಶ
Published 17 ಮೇ 2021, 14:30 IST
Last Updated 17 ಮೇ 2021, 14:30 IST
ಬೆಳಗಾವಿಯ ಮಹೇಶ್ ಪ್ರತಿಷ್ಠಾನದಲ್ಲಿ ಎಚ್‌ಐವಿ ಸೋಂಕಿತ, ಅನಾಥ ಮಕ್ಕಳಿಗಾಗಿ ರೂಪಿಸಿರುವ ಕೋವಿಡ್ ಐಸೊಲೇಷನ್ ಕೇಂದ್ರ
ಬೆಳಗಾವಿಯ ಮಹೇಶ್ ಪ್ರತಿಷ್ಠಾನದಲ್ಲಿ ಎಚ್‌ಐವಿ ಸೋಂಕಿತ, ಅನಾಥ ಮಕ್ಕಳಿಗಾಗಿ ರೂಪಿಸಿರುವ ಕೋವಿಡ್ ಐಸೊಲೇಷನ್ ಕೇಂದ್ರ   

ಬೆಳಗಾವಿ: ಎಚ್‌ಐವಿ ಸೋಂಕಿತರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ ನಗರದ ಕಣಬರ್ಗಿಯ ಮಹೇಶ್‌ ಪ್ರತಿಷ್ಠಾನವು, ಮಕ್ಕಳಿಗಾಗಿಯೇ ಕೋವಿಡ್–19 ಐಸೊಲೇಷನ್‌ ಕೇಂದ್ರವನ್ನು ಸಜ್ಜುಗೊಳಿಸಿದೆ.

ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ವರದಿ ಆಧರಿಸಿ, ಆರೈಕೆಗಾಗಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಕಟ್ಟಡದ ಒಂದು ಮಹಡಿಯಲ್ಲಿ 12 ಹಾಸಿಗೆಗಳ ಕೇಂದ್ರ ಸಿದ್ಧಗೊಳಿಸಲಾಗಿದೆ. ಕೃತಕ ಆಮ್ಲಜನಕ ಪೂರೈಕೆಗಾಗಿ ಮುಂಜಾಗ್ರತಾ ಕ್ರಮವಾಗಿ 10 ಆಮ್ಲಜನಕ ಸಿಲಿಂಡರ್‌ಗಳು ಮತ್ತು 5 ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳನ್ನು ಇಟ್ಟುಕೊಳ್ಳಲಾಗಿದೆ. ಪ್ರತಿಷ್ಠಾನದಲ್ಲಿ ಆಶ್ರಯ ಪಡೆದಿರುವ ಮಕ್ಕಳೊಂದಿಗೆ, ನಗರದಲ್ಲಿರುವ ಇತರ ಅನಾಥಾಶ್ರಮಗಳಲ್ಲಿನ ಮಕ್ಕಳಲ್ಲಿ ಕೋವಿಡ್ ದೃಢಪಟ್ಟಲ್ಲಿ ಪ್ರತ್ಯೇಕವಾಗಿ ಇರಿಸುವುದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಗಾಳಿ–ಬೆಳಕಿನ ಲಭ್ಯತೆ ಅಲ್ಲಿದೆ.

ಮೊದಲನೆಯದು:

ADVERTISEMENT

ಜಿಲ್ಲೆಯಲ್ಲಿ, ಮಕ್ಕಳಿಗೆಂದೇ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರ ರೂಪಿಸಿರುವುದು ಇದೇ ಮೊದಲನೆಯದಾಗಿದೆ.

‘ಪ್ರತಿಷ್ಠಾನದಲ್ಲಿ ಸದ್ಯ 45 ಮಕ್ಕಳಿಗೆ ಆಶ್ರಮ ನೀಡಲಾಗಿದೆ. ಅವರನ್ನು ಮತ್ತು ಅಲ್ಲಿನ ಸಿಬ್ಬಂದಿಯನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ 3 ತಿಂಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೆ ಮಕ್ಕಳಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಆದರೆ, 3ನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ತಗಲುವ ಸಾಧ್ಯತೆ ಇದೆ ಎಂಬ ತಜ್ಞರ ವರದಿ ಆಧರಿಸಿ ಐಸೊಲೇಷನ್‌ ಕೇಂದ್ರ ರೂಪಿಸಿದ್ದೇವೆ. ಸಮಸ್ಯೆಯಾದಾಗ ಪರದಾಡುವುದಕ್ಕಿಂತ ಮುಂಚಿತವಾಗಿಯೇ ತಯಾರಿ ನಡೆಸಿದ್ದೇವೆ. ಪ್ರತಿಷ್ಠಾನದ ಮಕ್ಕಳಿಗಷ್ಟೆ ಸೀಮಿತವಾಗಿಲ್ಲ. ನಗರದ ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೆ ಕೋವಿಡ್ ದೃಢಪಟ್ಟಲ್ಲಿ ಹಾಸಿಗೆ ಒದಗಿಸಲಾಗುವುದು’ ಎಂದು ಅಧ್ಯಕ್ಷ ಮಹೇಶ್ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಭಾಯಿಸುವುದಕ್ಕಾಗಿ:

‘ಚಿಕಿತ್ಸೆಗಾಗಿ ಒಬ್ಬ ವೈದ್ಯರು, ಮೂವರು ನರ್ಸ್‌ಗಳು, ಇಬ್ಬರು ಸಹಾಯಕರು ಇರಲಿದ್ದಾರೆ. ಮಾರ್ಗಸೂಚಿ ಪ್ರಕಾರ ಅವರೆಲ್ಲರೂ ಪಿಪಿಇ ಉಡುಪು ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಅಭಾವ ಉಂಟಾಗಿರುವುದರಿಂದಾಗಿ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ನಮ್ಮ ಕೈಲಾದಷ್ಟು ಮಟ್ಟದಲ್ಲಿ ಈ ಉಪಕ್ರಮ ಕೈಗೊಂಡಿದ್ದೇವೆ. ಹಾಸಿಗೆಗಳು ಹಾಗೂ ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳಿಗೆ ದಾನಿಗಳು ಆರ್ಥಿಕವಾಗಿ ನೆರವಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎಚ್‌ಐವಿ ಸೋಂಕಿತ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ, ಯಾರಾದರೊಬ್ಬರಲ್ಲಿ ಕೋವಿಡ್ ಕಾಣಿಸಿಕೊಂಡರೆ ಇತರ ಮಕ್ಕಳು ಸುಲಭವಾಗಿ ಬಾಧೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ತಕ್ಷಣವೇ ಪ್ರತ್ಯೇಕಿಸಲಾಗುವುದು. ಕೇಂದ್ರದ ಸೌಲಭ್ಯಗಳು ವ್ಯರ್ಥವಾದರೂ ಪರವಾಗಿಲ್ಲ; ಮಕ್ಕಳಿಗೆ ಸೋಂಕು ಬಾಧಿಸದಿರಲೆಂಬ ಪ್ರಾರ್ಥನೆ ನಮ್ಮದಾಗಿದೆ. ಹಾಗೊಂದು ವೇಳೆ ದೃಢವಾದರೆ ಸಮರ್ಥವಾಗಿ ನಿಭಾಯಿಸುತ್ತೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.