ADVERTISEMENT

ಮೆಕ್ಕೆಜೋಳ: ಟಿಸಿಲೊಡೆದ ತೆನೆಗಳು, ಕಮರಿದ ಕಾಳು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:56 IST
Last Updated 1 ಸೆಪ್ಟೆಂಬರ್ 2025, 2:56 IST
- ಉಮರಾಣಿ ಗ್ರಾಮದಲ್ಲಿ ರೈತ ಗಜಾನಂದ ದಾನನ್ನವರ ಹೊಲದಲ್ಲಿ ಟಿಸಿಲೊಡೆದ ಮೆಕ್ಕೆಜೋಳದ ತೆನೆಗಳು.
- ಉಮರಾಣಿ ಗ್ರಾಮದಲ್ಲಿ ರೈತ ಗಜಾನಂದ ದಾನನ್ನವರ ಹೊಲದಲ್ಲಿ ಟಿಸಿಲೊಡೆದ ಮೆಕ್ಕೆಜೋಳದ ತೆನೆಗಳು.   

ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಗ್ರಾಮದ ರೈತ ಗಜಾನಂದ ದಾನನ್ನವರ ಹೊಲದಲ್ಲಿ ಹಾಕಿದ ಮೆಕ್ಕೆಜೋಳದಲ್ಲಿ ಒಂದೇ ಗಿಡಕ್ಕೆ ಮೂರ್ನಾಲ್ಕು ತೆನೆಗಳು ಟಿಸಿಲು ಒಡೆದು ಕಾಳು ಗಟ್ಟಿಯಾಗದೇ ಕಮರುತ್ತಿರುವದರಿಂದ ರೈತರು ಆತಂಕಗೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯು ಕೈ ಕೊಟ್ಟಿದ್ದರಿಂದ ರೈತರಿಗೆ ಚಿಂತೆ ಕಾಡುತ್ತಿದೆ.

ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ ಕಾವೇರಿ ತಳಿಯ ಬೀಜ ಬಿತ್ತನೆ ಮಾಡಿದ್ದಾರೆ. ಕಾಲ ಕಾಲಕ್ಕೆ ಸುರಿದ ಮಳೆಯಿಂದ ಬೆಳೆ ಏನೋ ಚೆನ್ನಾಗಿ ಬಂದಿದೆ. ಆದರೆ ಕಾಳುಕಟ್ಟುವ ಸಮಯದಲ್ಲಿ ಕವಲೊಡೆದ ತೆನೆಗಳಿಂದ ಇಳುವರಿ ಕುಂಟಿತಗೊಳ್ಳುವ ಭಯ ಕಾಡುತ್ತಿದೆ. ಕೆಲವೊಂದು ಗಿಡಗಳಿಗೆ ನೆಲಮಟ್ಟದಲ್ಲಿಯೇ ಕಾಂಡಗಳಿಗೆ ತೆನೆಯಾಗಿದ್ದು ಅಚ್ಚರಿ ತರಿಸಿದೆ. ಇದೇ ಜಮೀನಿನಲ್ಲಿ ಬೇರೆ ತಳಿಯ ಮೆಕ್ಕೆಜೋಳದ ಬೀಜ ಬಿತ್ತನೆ ಮಾಡಲಾಗಿದ್ದು, ತೆನೆಗಳು ಉತ್ತಮವಾಗಿದ್ದು, ಕಾಳುಗಟ್ಟಿಯಾಗಿವೆ.

ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಕಾವೇರಿ ತಳಿಯ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿದ್ದು, ಬಹುತೇಕರ ಹೊಲದಲ್ಲಿ ಗಜಾನಂದ ದಾನನ್ನವರ ಹೊಲದಲ್ಲಿಯಾಗಿರುವಂತೆ ಒಂದೇ ಹಿಡದಲ್ಲಿ ಮೂರ್ನಾಲ್ಕು ತೆನೆಗಳು ಟಿಸಿಲು ಒಡೆದು ಸಮರ್ಪಕವಾಗಿ ಕಾಳುಕಟ್ಟಿಲ್ಲದಿರುವುದು ಚಿಂತೆಗೆ ಕಾರಣವಾಗಿದೆ. ಕೆಲವೊಂದು ಗಿಡಗಳಿಗಂತೂ ಒಂದು ತೆನೆಗೆ ಮತ್ತೊಂದು ತೆನೆ, ಆ ತೆನೆಗೆ ಇನ್ನೊಂದು ತೆನೆಯಂತೆ ಹೀಗೆ ಒಂದೇ ಗಿಡದಲ್ಲಿ ನಾಲ್ಕೈದು ತೆನೆಗಳು ಟಿಸಿಲು ಒಡೆದಿರುವದನ್ನು ಕಾಣಬಹುದಾಗಿದೆ.

ADVERTISEMENT

ಜೂನ್ ಮೊದಲ ವಾರದಲ್ಲಿ ಮೆಕ್ಕೆಜೋಳವನ್ನು ಗಜಾನಂದ ದಾನನ್ನವರ ಬಿತ್ತನೆ ಮಾಡಿದ್ದಾರೆ. ಯಾವುದೇ ಮೇಲುಗೊಬ್ಬರನ್ನು ನೀಡಿಲ್ಲ. ಮಳೆ ಕೊರತೆಯಾದಾಗ ನೀರು ಹಾಯಿಸಿದ್ದಾರೆ. ನೀರಿನ ಕೊರತೆಯೂ ಆಗಿಲ್ಲ. ಗಿಡಗಳು ಮಾಡದೇ ಹಸಿರು ಹಸಿರಾಗಿವರ. ಆದರೆ ಕವಲೊಡೆದ ತೆನೆಗಳಲ್ಲಿ ಕಾಳುಗಟ್ಟದೇ ಇರುವದರಿಂದ ಹಾಗೂ ಕಟ್ಟಿದ ಕಾಳು ಗಟ್ಟಿಯಾಗದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ.

ತಾಲ್ಲೂಕಿನ ಸಾಕಷ್ಟು ರೈತರು ಕಾವೇರಿ ತಳಿಯ ಬೀಜ ಬಿತ್ತನೆ ಮಾಡಿದ್ದರಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಹೊಲಕ್ಕೆ ಆಗಮಿಸಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂಬುವುದು ಮೆಕ್ಕೆಜೋಳ ಬೆಳೆದ ರೈತರ ಬೇಡಿಕೆಯಾಗಿದೆ.

’ತಮ್ಮ ಹೊಲದಲ್ಲಿ ಹಾಕಿದ ಕಾವೇರಿ ತಳಿಯ ಬೀಜದಿಂದ ಮಾತ್ರ ಇಂತಹ ದೋಷ ಕಂಡು ಬಂದಿದ್ದು, ಬೇರೆ ತಳಿಯ ಮೆಕ್ಕೆಜೋಳದ ಗಿಡಗಳು ಚೆನ್ನಾಗಿಯೇ ಇದ್ದು, ತೆನೆಯಲ್ಲಿ ಉತ್ತಮ ಕಾಳು ಕಂಡು ಬರುತ್ತಿದೆ ಎನ್ನುತ್ತಾರೆ ಗಜಾನಂದ ದಾನನ್ನವರ, ಉಮರಾಣಿ.

’ಮೆಕ್ಕೆಜೋಳದ ಬೆಳೆ ಹುಲುಸಾಗಿದ್ದು, ತೆನೆಗಳು ಟಿಸಿಲು ಒಡೆದಿದ್ದರೂ ಕಾಳುಗಟ್ಟದಿರುವುದು ಏಕೆ ಎಂಬುವದನ್ನು ರೈತರ ಹೊಲಕ್ಕೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ. ಬಿ ಚವ್ಹಾಣ ಹೇಳಿದ್ದಾರೆ.

- ಚಿಕ್ಕೋಡಿ ತಾಲ್ಲೂಕಿನ ಉಮರಾಣಿ ಗ್ರಾಮದ ರೈತ ಗಜಾನಂದ ದಾನನ್ನವರ ಹೊಲದಲ್ಲಿ ಹುಲುಸಾಗಿ ಬೆಳೆದಿರುವ ಮೆಕ್ಕೆಜೋಳದ ಬೆಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.