
ಸವದತ್ತಿ: ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಶುಕ್ರವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದರು.
ರೈತ ಪ್ರಮುಖ ಫಕ್ರಸಾಬ ನದಾಫ ಮಾತನಾಡಿ, ‘ಗೋವಿನ ಜೋಳ ಖರೀದಿಯಲ್ಲಿ ತಾರತಮ್ಯ ನಡೆದಿರುವ ಕಾರಣ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕಿದೆ. ಶೀಘ್ರವಾಗಿ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತಾಲ್ಲೂಕಿನಾದ್ಯಂತ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ₹ 2,410 ನ್ನು ನೀಡಿದರೂ ಮಾರುಕಟ್ಟೆಯಲ್ಲಿ ಕೇವಲ ₹ 1,700ಕ್ಕೆ ಮಾತ್ರ ಖರೀದಿಸುತ್ತಿದ್ದಾರೆ. ಗೋವಿನ ಜೋಳದ ಬೀಜ 5 ಕೆ.ಜಿ. ಗೆ ₹ 2,500 ದರವಿದ್ದು ರೈತರಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿಲ್ಲ. ಹೆಸರು ಬೆಳೆಯ ಸಂಕಷ್ಟ ಹೇಳತೀರದಷ್ಟಿದೆ. ಅದಕ್ಕೂ ನ್ಯಾಯಸಮ್ಮತ ಬೆಲೆಯನ್ನು ರೈತ ಪಡೆಯಲಿಲ್ಲ. ರೈತರ ಒತ್ತಾಸೆಯಂತೆ ಖರೀದಿ ಕೇಂದ್ರ ಆರಂಭಿಸುವುದಾಗಿ ಸರಕಾರ ಭರವಸೆ ನೀಡಿತು. ನೋಂದಣಿ ಪ್ರಕ್ರಿಯೆಯೂ ನಡೆಯಿತು. ಆದರೆ ಇಲ್ಲಿಯವರೆಗೂ ರೈತರಿಂದ ಸರ್ಕಾರ ಹೆಸರು ಖರೀದಿ ಮಾಡಲು ಮುಂದೆ ಬಂದಿಲ್ಲ’ ಎಂದು ದೂರಿದರು.
ಚಿಕ್ಕುಂಬಿ ಗ್ರಾಮದ ರೈತ ಪ್ರಮುಖ ಈರಪ್ಪ ಪಾಟೀಲ ಮಾತನಾಡಿ, ‘ಜಿಪಿಎಸ್ ಮಾಡಿದವರ ಹೆಸರಿನ ಮಾತ್ರ ಖರೀದಿ ನಡೆದಿದೆ. 1 ಎಕರೆಗೆ 3 ಕ್ವಿಂಟಲ್ ಖರೀದಿಸುವುದಿದ್ದರೂ ಹೆಚ್ಚಿನ ಜಮೀನಿದ್ದ ರೈತರ ಬೆಳೆ ಖರೀದಿಸಿಲ್ಲ. ಒಳ್ಳೆಯ ಕಾಳು ತೋರಿಸಿದರೂ ಡ್ಯಾಮೇಜ್ ಇದೆ ಎನ್ನುವ ಮೂಲಕ ಕಡಿಮೆ ದರ ನಿಗದಿ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ತಹಶೀಲ್ದಾರರು ಗಮನಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ರೈತರು ಬೀದಿಗಿಳಿದು ತೀವ್ರ ಹೋರಾಟ ನಡೆಸುವ ಮುನ್ನವೇ ಸರ್ಕಾರ ಎಚ್ಚೆತ್ತು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೆಸರು ಬೆಳೆ ಮತ್ತು ಗೋವಿನ ಜೋಳ ಖರೀದಿಸದ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿದರು.
ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಕಪ್ಪನ್ನವರ, ನಾಗಪ್ಪ ಪ್ರಭುನವರ, ಶಂಕರ ಬೆಡಸೂರ, ಮೌನೇಶ ನಾಯ್ಕರ, ನಿಂಗನಗೌಡ ಸಂಗನಗೌಡ್ರ, ಎಮ್.ಎಸ್. ಹಂಜಿಬುಟ್ಟಿ, ಕಲ್ಲನಗೌಡ ಸುಳ್ಳದ, ಕೆ.ಎಂ. ಹೊನ್ನಪ್ಪನವರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.