ADVERTISEMENT

ಬೈಲಹೊಂಗಲ | ಮಕರ ಸಂಕ್ರಮಣಕ್ಕೆ ಸೊಗಲ ಸಜ್ಜು: ಸುಕ್ಷೇತ್ರದಲ್ಲಿ ಮನೆಮಾಡಿದ ಸಂಭ್ರಮ

ರವಿ ಎಂ.ಹುಲಕುಂದ
Published 14 ಜನವರಿ 2024, 8:18 IST
Last Updated 14 ಜನವರಿ 2024, 8:18 IST
ಬೈಲಹೊಂಗಲ ಸಮೀಪದ ಸೊಗಲದ ಸೋಮೇಶ್ವರ ದೇವಸ್ಥಾನದಲ್ಲಿ ಶಿವ–ಪಾರ್ವತಿಯ ಹೊಸ ಪ್ರತಿಮೆ ಸಿದ್ಧಪಡಿಸಿರುವುದು
ಬೈಲಹೊಂಗಲ ಸಮೀಪದ ಸೊಗಲದ ಸೋಮೇಶ್ವರ ದೇವಸ್ಥಾನದಲ್ಲಿ ಶಿವ–ಪಾರ್ವತಿಯ ಹೊಸ ಪ್ರತಿಮೆ ಸಿದ್ಧಪಡಿಸಿರುವುದು   

ಬೈಲಹೊಂಗಲ: ಸಮೀಪದ ಸೊಗಲದ ಸೋಮೇಶ್ವರ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಅಂಗವಾಗಿ ಈಗ ಸಂಭ್ರಮ ಮನೆಮಾಡಿದೆ. ಜ.15ರಂದು ಸಂಜೆ 4ಕ್ಕೆ ಸುಕ್ಷೇತ್ರದ ಕೆಳಗಿನ ಹೊಂಡದಲ್ಲಿ ತೆಪ್ಪದ ರಥೋತ್ಸವ ನೆರವೇರಲಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ.

‘ಶಿವ–ಪಾರ್ವತಿ ವಿವಾಹವಾದ ಸ್ಥಳ ಸೊಗಲದಲ್ಲಿ ಪುಣ್ಯಸ್ನಾನ ಮಾಡಿದರೆ ಗಂಗಾ ನದಿಯಲ್ಲಿ ಸ್ನಾನ ಮಾಡಿದಂತೆ’ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಸಂಕ್ರಾಂತಿಯಲ್ಲಿ ಭಕ್ತರ ದಂಡೇ ಈ ಧಾರ್ಮಿಕ ಕ್ಷೇತ್ರದತ್ತ ಹರಿದುಬರುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಜಲಪಾತದಲ್ಲಿ ಪುಣ್ಯಸ್ಥಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಚಕ್ಕಡಿ, ಟ್ರ್ಯಾಕ್ಟರ್, ಬಸ್, ಕಾರು, ದ್ವಿಚಕ್ರ ವಾಹನಗಳಲ್ಲಿ ಬರುವ ಭಕ್ತರಿಗೆ ಪ್ರತ್ಯೇಕವಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಯಾತ್ರಿ ನಿವಾಸ, ನಿರೀಕ್ಷಣಾ ಮಂದಿರ, ದೇವಸ್ಥಾನ ಆವರಣದ ಕೊಠಡಿಗಳಲ್ಲಿ ವಸತಿ ಸೌಕರ್ಯ ಒದಗಿಸಲಾಗಿದೆ.

ಹಬ್ಬದ ದಿನ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಬಿಲ್ವಾರ್ಚನೆ, ಬುತ್ತಿ, ಎಲೆ, ಮೂರ್ತಿ ಪೂಜೆ, ಪುಷ್ಪಾರ್ಚನೆ, ಅಲಂಕಾರ, ಅಭಿಷೇಕ ಮತ್ತಿತರ ಕಾರ್ಯಕ್ರಮ ನೆರವೇರಲಿವೆ. ಸಂಜೆ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು, ತೆಪ್ಪದ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಹೊಸೂರಿನ ಗಂಗಾಧರ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡುವರು. ಶಾಸಕ ಮಹಾಂತೇಶ ಕೌಜಲಗಿ ಪಾಲ್ಗೊಳ್ಳುವರು.

ADVERTISEMENT

ದೇವಸ್ಥಾನದ ಜೀರ್ಣೋದ್ಧಾರ: ‘ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಹಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕೈಗೊಳ್ಳಲಾಗುತ್ತಿದೆ. ಹೊಸದಾಗಿ ಶಿವ–ಪಾರ್ವತಿ ಪ್ರತಿಮೆ ಸಿದ್ಧಪಡಿಸಲಾಗಿದೆ. ನೂತನ ಮಂಟಪ ನಿರ್ಮಾಣ ಮತ್ತಿತರ ಕಾಮಗಾರಿ ನಡೆದಿವೆ’ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರನಗೌಡ ಸಂಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೈಲಹೊಂಗಲ ಸಮೀಪದ ಸೊಗಲದ ಸೋಮೇಶ್ವರ ದೇವಸ್ಥಾನ
ಬೈಲಹೊಂಗಲ ಸಮೀಪದ ಸೊಗಲದ ಸೋಮೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿರುವುದು
ಸೊಗಲದಲ್ಲಿ ಪುಣ್ಯಸ್ಥಾನ ಮಾಡುವ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸಿಗರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕು
–ಸಂತೋಷ ಬಶಟ್ಟಿ ಭಕ್ತ
₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆದಿದೆ. ಮುಂಬರುವ ದಿನಗಳಲ್ಲಿ ದೇವಸ್ಥಾನದ ಸಮಗ್ರ ಚಿತ್ರಣ ಬದಲಾಗಲಿದೆ
–ವೀರನಗೌಡ ಸಂಗಣ್ಣವರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.