ADVERTISEMENT

ಅಪೂರ್ಣ ಮಾಹಿತಿ ನೀಡಿದ ಕೇಂದ್ರ: ವಕೀಲ ದೂರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 13:36 IST
Last Updated 24 ಅಕ್ಟೋಬರ್ 2020, 13:36 IST

ಬೆಳಗಾವಿ: ‘ದೇಶದಲ್ಲಿ 2014ರಿಂದ ಇಲ್ಲಿಯವರೆಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಮೀಸಲಿಟ್ಟ ಮತ್ತು ಖರ್ಚು ಮಾಡಿದ ಅನುದಾನದ ಬಗ್ಗೆ ಸಮರ್ಪಕ ಮಾಹಿತಿ ನೀಡದೆ ಕೇಂದ್ರ ಸರ್ಕಾರವು ನುಣುಚಿಕೊಂಡಿದೆ’ ಎಂದು ಅಥಣಿಯ ವಕೀಲ ಭೀಮಗನೌಡ ಪರಗೊಂಡ ದೂರಿದ್ದಾರೆ.

‘ಮಾಹಿತಿ ಹಕ್ಕು ಕಾಯ್ದೆ ಅಡಿ ನನ್ನ ಅರ್ಜಿಯ ಅನ್ವಯ ಕೋರಿದ ಮಾಹಿತಿಯನ್ನು ಕೇಂದ್ರದ ಕೈಗಾರಿಕಾ ಉತ್ತೇಜನ ಮತ್ತು ವ್ಯಾಪಾರ ಸಚಿವಾಲಯ ನೀಡಿದೆ. ಅ. 6ರಂದು ಸಲ್ಲಿಸಿದ್ದ ಅರ್ಜಿ ಅ.12ರಂದು ಸಚಿವಾಲಯದಲ್ಲಿ ಸ್ವೀಕೃತಿಯಾಗಿದೆ. ದೊರೆತಿರುವ ಉತ್ತರದ ಪ್ರಕಾರ, ಕೇಂದ್ರದ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಸಚಿವಾಲಯ ಅಡಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಯೋಜನೆಯಲ್ಲಿ ರಾಜ್ಯವಾರು ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲವಂತೆ’ ಎಂದು ತಿಳಿಸಿದ್ದಾರೆ.

‘ಮೇಕ್ ಇನ್ ಇಂಡಿಯಾ ಜಾರಿಗೆ ತಂದಾಗ ಸ್ವದೇಶಿ ಉದ್ಯಮಿಗಳಿಗೆ ಬಹು ದೊಡ್ಡ ನೆರವು ಸಿಗುತ್ತದೆ ಎಂದು ಅಬ್ಬರ ಪ್ರಚಾರ ಮಾಡಲಾಗಿತ್ತು. ಆದರೆ, ಈಗ ವಿದೇಶಿ ಬಂಡವಾಳ ಹೂಡಿಕೆ ಅವಕಾಶ ನೀಡಿ, ಸ್ವದೇಶಿ ಉದ್ಯಮಿಗಳನ್ನು ನಿರ್ನಾಮ ಮಾಡಿ, ವಿದೇಶಿ ಉದ್ಯಮಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವುದಾಗಿ ಹೇಳುತ್ತಿದೆ. 2020-21ರಲ್ಲಿ ಮಾತ್ರ ಮೇಕ್ ಇನ್ ಇಂಡಿಯಾ ಯೋಜನೆಗೆ ₹ 140 ಕೋಟಿ ಮೀಸಲಿಡಲಾಗಿದೆ. ಅಪೂರ್ಣ ಮಾಹಿತಿ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.