ADVERTISEMENT

ಬೆಳಗಾವಿ | ಮಲಪ್ರಭಾ ಕಾರ್ಖಾನೆ: ಸಮಗ್ರ ತನಿಖೆಯಾಗಲಿ

ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದಿಂದ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:18 IST
Last Updated 2 ಸೆಪ್ಟೆಂಬರ್ 2025, 2:18 IST
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ವತಿಯಿಂದ ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು   
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ವತಿಯಿಂದ ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು      

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತನಿಖೆ ವಿಳಂಬ ಮಾಡುತ್ತಿರುವ ಜಿಲ್ಲಾಧಿಕಾರಿ ವಿರುದ್ಧವೂ ರೈತರು ಗುಡುಗಿದರು.

‘ರೈತ ಸಂಘಗಳ ಮಹಾಸಂಘಗಳ ಒಕ್ಕೂಟ ಹಾಗೂ ಕಾರ್ಖಾನೆಯ ಸದಸ್ಯರ ಒತ್ತಾಯದ
ಮೇರೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿ, ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. 2017 ರಿಂದ 2023ರವರೆಗೆ ಮಾತ್ರ ನ್ಯಾಯಾಂಗ ತನಿಖೆಗೆ ಸರ್ಕಾರದಿಂದ ಆದೇಶ ಮಾಡಲಾಗಿದೆ. ಆದರೆ, 2024 ಮತ್ತು 25ನೇ ಸಾಲಿನಲ್ಲಿ ಹೆಚ್ಚಿನ ಭ್ರಷ್ಟಾಚಾರ ನಡೆದಿದ್ದು, ಮುಖ್ಯವಾಗಿ ಈ ವರ್ಷಗಳ ಅವಧಿಯ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸರ್ಕಾರ ಈ ಹಿಂದೆ ನೀಡಿದೆ ತನಿಖೆ ಆದೇಶ ಕಾರ್ಖಾನೆಯ ಪರವಾಗಿ ಇದೆ. ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ, 2024 ಮತ್ತು 25ನೇ ಸಾಲಿನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಹಾ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಬೀರಪ್ಪ ದೇಶನೂರ ಆಗ್ರಹಿಸಿದರು.

ಸಂಘಟನೆಯ ಕಾರ್ಯದರ್ಶಿ ಬಸನಗೌಡ ಪಾಟೀಲ ಮಾತನಾಡಿ, ‘ಕಾರ್ಖಾನೆಯ ಆಡಳಿತ ಮಂಡಳಿಯವರು ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಮೂಲಕ ಲೂಟಿ ಮಾಡಿದ ಹಣ ಕಾರ್ಖಾನೆಗೆ ವಾಪಸ್ ಪಾವತಿಸುವಂತೆ ಕ್ರಮವಹಿಸಬೇಕು’ ಎಂದರು.

ಮುಖಂಡರಾದ ಬಸವರಾಜ ಮೊಕಾಸಿ, ಸುರೇಶ ವಾಲಿ, ಈರಣ್ಣ ಅಂಗಡಿ, ಸಂಜೀವಕುಮಾರ ತಿಲಗರ, ಮಡಿವಾಳಪ್ಪ ಪಟ್ಟಣಶೆಟ್ಟಿ, ರುದ್ರಗೌಡ ಪಾಟೀಲ, ಸುರೇಶ ಕರವಿನಕೊಪ್ಪ, ಆನಂದ, ಸುರೇಶ, ರುದ್ರಪ್ಪ ಕೊಡ್ಲಿ, ಪ್ರಸಾದ ಕುಲಕರ್ಣಿ, ಮಂಜುನಾಥ ಕಿಟದಾಳ ನೇತೃತ್ವ ವಹಿಸಿದ್ದರು.

ಬೆಳಗಾವಿಯ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಭೂ ಬಳಕೆ ರದ್ದು ಮಾಡಿದ ಕ್ರಮ ಖಂಡಿಸಿ ಬುಡಾ ಕಚೇರಿಯ ಮುಂದೆ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು  
2017 ರಿಂದ 2023ರ ವರೆಗೆ ಮಾತ್ರ ನ್ಯಾಯಾಂಗ ತನಿಖೆಗೆ ಆದೇಶ | 2024, 2025ನೇ ಸಾಲಿನಲ್ಲಿ ಹೆಚ್ಚಿನ ಭ್ರಷ್ಟಾಚಾರದ ಆರೋಪ | ಈ ಎರಡು ವರ್ಷಗಳ ತನಿಖೆಯನ್ನೂ ಮಾಡಿಸಲು ಆಗ್ರಹ 

ಮಾರುಕಟ್ಟೆ ಭೂ ಬಳಕೆ ರದ್ದು: ಆಕ್ರೋಶ

ಬೆಳಗಾವಿ: ಇಲ್ಲಿನ ಜೈ ಕಿಸಾನ್‌ ಖಾಸಗಿ ಸಗಟು ಮಾರುಕಟ್ಟೆ ಬಂದ್‌ ಮಾಡುವ ಉದ್ದೇಶದಿಂದ ಭೂ ಬಳಕೆಯನ್ನು ರದ್ದು ಮಾಡಿದ್ದನ್ನು ಖಂಡಿಸಿ ಜೈ ಕಿಸಾನ್‌ ಸಗಟು ತರಕಾರಿ ವ್ಯಾಪಾರಿಗಳ ಅಸೊಸಿಯೇಷನ್‌ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಬುಡಾ ಆಯುಕ್ತರ ಕಚೇರಿ ಮುಂದೆ ಸೇರಿದ ವ್ಯಾಪಾರಿಗಳು ತಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಘೋಷಣೆ ಕೂಗಿದರು. ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ತರಕಾರಿ ಬೆಳೆಯುವ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿದೆ. 70 ವರ್ಷಗಳ ಕಾಲ ಮಹಾತ್ಮ ಫುಲೆ ಭಾಜಿ ಮಾರ್ಕೆಟ್‌ನಲ್ಲಿ ವ್ಯಾಪಾರ ನಡೆಯುತ್ತಿತ್ತು. ಜನಸಂಖ್ಯೆ ಹೆಚ್ಚಾದ ಕಾರಣ ಕಂಟೋನ್ಮೆಂಟ್‌ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. 30 ವರ್ಷಗಳ ಬಳಿಕ ಅಲ್ಲಿಯೂ ಜಾಗ ಸಾಲದ ಕಾರಣ 2019ರಲ್ಲಿ ಎಪಿಎಂಸಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ತರಕಾರಿ ಬೆಳೆಗಾರರಿಗೆ ಶೋಷಣೆ ಆರಂಭವಾಯಿತು. ರೈತರನ್ನು ಹಾಗೂ ವ್ಯಾಪಾರಿಗಳನ್ನು ಸಂಕಷ್ಟದಿಂದ ಪಾರು ಮಾಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಮಾರುಕಟ್ಟೆ ಸ್ಥಾಪಿಸಲಾಗಿದೆ. ಇದರ ಪರಿಣಾಮ ಜೈ ಕಿಸಾನ್‌ ಮಾರುಕಟ್ಟೆ ಆರಂಭವಾಗಿದ್ದು ಎಲ್ಲರಿಗೂ ಸಗಟು ವ್ಯಾಪಾರಕ್ಕೆ ಅನುಕೂಲವಾಗಿದೆ. ಆದರೆ ಈಗ ಈ ಮಾರುಕಟ್ಟೆ ಭೂ ಬಳಕೆ ಮಾಡುವುದುನ್ನು ಬುಡಾ ರದ್ದುಪಡಿಸಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.