ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ವತಿಯಿಂದ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆಸಿದ ಪ್ರತಿಭಟನೆಯ ಚಿತ್ರ
ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರ ಖಂಡಿಸಿ ರೈತರೆಲ್ಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಮಯದಲ್ಲಿ ಕಾರ್ಖಾನೆ ಉಳಿಸುತ್ತೇವೆ ಎಂದು ಬಂದಿರುವ ಮುಖಂಡರು ಎಲ್ಲಿ ಹೋಗಿದ್ದರು’ ಎಂದು ರೈತ ಅಭಿವೃದ್ಧಿ ಪೆನಲ್ ನಾಯಕರಾದ ಬಸವರಾಜ ಮೊಕಾಶಿ, ಬಸನಗೌಡ ಪಾಟೀಲ ಪ್ರಶ್ನಿಸಿದರು.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಕಾರ್ಖಾನೆ ದಿವಾಳಿ ಅಂಚಿನಲ್ಲಿದೆ. ಇದನ್ನೆ ನೆಪವಾಗಿಟ್ಟುಕೊಂಡು ಕಾರ್ಖಾನೆ ಖಾಸಗೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ಬಗ್ಗೆ ಎಂದೂ ಪ್ರಶ್ನೆ ಮಾಡದವರು ಇಂದು ಬಂದು ಚುನಾವಣೆಗೆ ನಿಲ್ಲುತ್ತಿರುವ ಗುಟ್ಟೇನು’ ಎಂದು ಕೇಳಿದರು.
‘ನಷ್ಟದಲ್ಲಿ ನಲುಗುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ಮಾಡುವುದು ಬೇಡ, ಅವಿರೋಧ ಆಯ್ಕೆ ಮಾಡೋಣ ಎಂದು ನಾವೆಲ್ಲ ಮನವಿ ಮಾಡಿಕೊಂಡೆವು. ಯಾರೂ ಗಮನ ಕೊಡಲಿಲ್ಲ. ದುಡ್ಡು ತಂದು ಹಾಕಿ ಕಾರ್ಖಾನೆ ಉಳಿಸುತ್ತೇವೆ ಎಂದು ಈ ಹಿಂದೆ ಬಂದವರು ಏನು ಮಾಡಿದರು ಎಂಬುದು ರೈತರಿಗೆಲ್ಲ ಗೊತ್ತಿರುವ ವಿಷಯ’ ಎಂದರು.
ಮುಖಂಡರಾದ ಬೀರಪ್ಪ ದೇಶನೂರ, ಅಭ್ಯರ್ಥಿಗಳಾದ ನಿಂಗಪ್ಪ ಹಣಜಿ, ಮೀನಾಕ್ಷಿ ನೆಲಗಳಿ, ಕೆಎಸ್ಆರ್ ಪಕ್ಷದ ಬಿ. ಜಿ. ಕುಂಬಾರ, ಪ್ರೇಮ ಚೌಗಲಾ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.