ADVERTISEMENT

ಕ್ಷುಲ್ಲಕ ಕಾರಣಕ್ಕೆ ಗಲಾಟೆ; ಸಹೋದರರಿಬ್ಬರ ಕುತ್ತಿಗೆ ಮೇಲೆ ಬ್ಲೇಡ್‌ನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 10:08 IST
Last Updated 8 ಜುಲೈ 2022, 10:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಂಕೇಶ್ವರ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ, ವ್ಯಕ್ತಿಯೊಬ್ಬ ಯುವಕರಿಬ್ಬರ ಕುತ್ತಿಗೆ ಭಾಗದ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ವಡ್ಡರ ಓಣಿಯ ನಿವಾಸಿಗಳಾದ ಸಂತೋಷ ವಡ್ಡರ ಹಾಗೂ ಇವರ ಸಹೋದರ ಲಕ್ಷ್ಮಣ ವಡ್ಡರ ಗಾಯಗೊಂಡವರು. ಆರೋಪಿ ದಿಲೀಪ್‌ ಎಂಬಾತ ಚಪ್ಪಲಿಯ ಚರ್ಮ ಕತ್ತರಿಸುವ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ. ಜೂಜಾಟವೇ ಗಲಾಟೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದಿಲೀಪ್‌ಗೆ ಸಂತೋಷ ₹ 1,000 ಕೊಡಬೇಕಾಗಿತ್ತು. ಪದೇಪದೇ ಕೇಳಿದರೂ ಹಣ ಕೊಡದ ಕಾರಣ ಶುಕ್ರವಾರ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಆಗ ದಿಲೀಪ ತನ್ನ ಬೇಜಿನಲ್ಲಿದ್ದ ಬ್ಲೇಡ್‌ ತೆಗೆದು ಸಂತೋಷ ಅವರ ಕುತ್ತಿಗೆ ಭಾಗದಲ್ಲಿ ಕೊಯ್ದ. ಸಂತೋಷ ಚೀರಾಟ ಕೇಳಿ ಅವರ ಕಿರಿಯ ಸಹೋದರ ಲಕ್ಷ್ಮಣ ನೆರವಿಗೆ ಓಡಿಬಂದರು. ಆಗ ಆರೋಪಿ ಲಕ್ಷ್ಮಣ ಮೇಲೂ ಬ್ಲೇಡ್‌ನಿಂದ ಹಲ್ಲೆ ಮಾಡಿದ ಎಂದು ತಿಳಿಸಲಾಗಿದೆ.

ADVERTISEMENT

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವಕರನ್ನು ಜನರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.