ADVERTISEMENT

ಬೆಳಗಾವಿ: ಸಾಂಪ್ರದಾಯಿಕ ಮತಗಳ ಮೇಲೆ ಮಂಗಲಾ ಕಣ್ಣು

ಗುಡಿ, ಮಠಗಳಿಗೆ ಭೇಟಿ; ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ

ಎಂ.ಮಹೇಶ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಶುಕ್ರವಾರ ಗಣಪತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಶುಕ್ರವಾರ ಗಣಪತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು   

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ, ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಶುಕ್ರವಾರ ವಿವಿಧ ದೇಗುಲ, ಮಠಗಳಿಗೆ ಭೇಟಿ ನೀಡುವ ಮೂಲಕ ಪಕ್ಷದ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿರುವ ಸಂದೇಶ ರವಾನಿಸಿದರು.

ಪುತ್ರಿಯರಾದ ಡಾ.ಸ್ಫೂರ್ತಿ ಪಾಟೀಲ ಮತ್ತು ಶ್ರದ್ಧಾ ಶೆಟ್ಟರ್‌ ಅವರೊಂದಿಗೆ ಕ್ಷೇತ್ರದ ವಿವಿಧೆಡೆ ಸಂಚರಿಸಿದರು. ಸುರೇಶ ಅಂಗಡಿ ಅವರು ಶುಭ ಕಾರ್ಯಕ್ರಮಗಳಿಗೆ ಮುನ್ನ ತೆರಳುತ್ತಿದ್ದ ರಾಣಿ ಚನ್ನಮ್ಮ ವೃತ್ತದಲ್ಲಿರುವ ಮಹಾಗಣಪತಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗೆಲುವು ದೊರಕಿಸಿಕೊಡುವಂತೆ ವಿಘ್ನ ನಿವಾರಕನಲ್ಲಿ ಮೊರೆ ಇಟ್ಟರು. ಬಳಿಕ ಲಕ್ಷ್ಮಿಟೇಕ್‌ನಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ, ಅಲ್ಲೂ ದೇವರಿಗೆ ಪೂಜೆ ಸಲ್ಲಿಸಿದರು. ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ನಂತರ ಶಿವಬಸವ ನಗರದಲ್ಲಿರುವ ಕಾರಂಜಿ ಮಠದಲ್ಲಿ ಅಲ್ಲಿನ ಪೀಠಾಧಿಪತಿ ಗುರುಸಿದ್ಧ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಪಕ್ಷದ ಮಹಾನಗರ ಘಟಕದ ಕಚೇರಿಗೆ ತೆರಳಿ ಅಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ‘ಸುರೇಶ ಅಂಗಡಿ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಜನರ ಸೇವೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪತಿಗೆ ತೋರಿದ ಪ್ರೀತಿ–ವಿಶ್ವಾಸವನ್ನು ನನಗೂ ತೋರುತ್ತೀರಿ ಎಂದು ನಂಬಿದ್ದೇನೆ. ಕಷ್ಟಕಾಲದಲ್ಲಿ ನಮ್ಮ ಕುಟುಂಬದ ಜೊತೆಗಿದ್ದ ನಿಮ್ಮೆಲ್ಲರಿಗೂ ಋಣಿಯಾಗಿದ್ದೇನೆ’ ಎಂದು ಭಾವನಾತ್ಮಕ ಮಾತುಗಳ ಮೂಲಕ ಕಾರ್ಯಕರ್ತರ ಮನ ಗೆಲ್ಲಲು ಪ್ರಯತ್ನಿಸಿದರು.

ADVERTISEMENT

ಅಭ್ಯರ್ಥಿ ಎನ್ನುವುದು ಖಚಿತ ಆಗುತ್ತಿದ್ದಂತೆಯೇ ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ಅವರಿಗೆ ಫಾಲೋವರ್‌ಗಳ ಸಂಖ್ಯೆ ದಿಢೀರನೆ ಸಾವಿರಗಟ್ಟಲೆ ಏರಿಕೆಯಾಗಿದೆ. ‘ಅಭಿವೃದ್ಧಿಯ ಸಂಕಲ್ಪ ನಮ್ಮದು! ಇರಲಿ ಬಿಜೆಪಿಗೆ ಮತ ನಿಮ್ಮದು! ಕ್ಷೇತ್ರದ ಪ್ರಗತಿಗಾಗಿ ನಿಮ್ಮ ಬೆಂಬಲ ಹಾಗೂ ಸಹಕಾರದ ನಿರೀಕ್ಷೆಯಲ್ಲಿ ನಾನು’ ಎಂಬ ಕವರ್ ಫೋಟೊ ಹಾಕಿ, ಸುರೇಶ ಅಂಗಡಿ ಅವರೊಂದಿಗೆ ಇರುವ ಹೊಸ ಪ್ರೊಫೈಲ್ ಫೋಟೊ ಬಳಸಿದ್ದಾರೆ. ಅವರಿಗೆ ಫಾಲೋವರ್‌ಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಟಿಕೆಟ್ ಆಕಾಂಕ್ಷಿಯೂ ಆಗಿದ್ದ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಸೇರಿದಂತೆ ಹಲವರು ಮಂಗಲಾ ಅವರನ್ನು ಭೇಟಿಯಾಗಿ ಅಭಿನಂದಿಸಿದರು.

ಇನ್ನೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು, ತಾವು ಶಾಸಕರಾಗಿರುವ ಯಮಕನಮರಡಿಯಲ್ಲಿ ಜನರ ಅಭಿಪ್ರಾಯ ಆಲಿಸಿ ಉಪ ಚುನಾವಣೆಗೆ ಅವರಿಂದ ಒಪ್ಪಿಗೆ ಪಡೆದರು. ಅವರೂ ಸಾಮಾಜಿಕ ಜಾಲತಾಣವನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ.

* ಸುರೇಶ ಅಂಗಡಿ ಅವರಂತೆ ಕೆಲಸ ಮಾಡಲು ಶಕ್ತಿ ನೀಡುವಂತೆ ದೇವರನ್ನು ಪ್ರಾರ್ಥಿಸಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿ ನಿರ್ವಹಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಒಂದೆಡೆ ಸಂತೋಷ, ಇನ್ನೊಂದೆಡೆ ಅವರಿಲ್ಲವೆಂಬ ನೋವಿದೆ.

- ಮಂಗಲಾ ಅಂಗಡಿ, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.