ADVERTISEMENT

‘ಅಧಿವೇಶನ: ಸಚಿವ ಸಂಪುಟದ ತೀರ್ಮಾನಕ್ಕೆ ಬದ್ಧ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 12:49 IST
Last Updated 13 ಜುಲೈ 2021, 12:49 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ15 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಸಚಿವ ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿದ್ದೇನೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘2018ರ ಡಿಸೆಂಬರ್‌ ಬಳಿಕ ಇಲ್ಲಿ ಅಧಿವೇಶನ ನಡೆದಿಲ್ಲ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಬೇಕು ಎಂದು ಕೋರಿದ್ದೇನೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದರು.

‘ನಾನು, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಈ ಭಾಗದವರು. ಆದರೆ, ಹೀಗೆಯೇ ನಡೆಸಿ ಎಂದು ನಿರ್ದೇಶಿಸುವ ಅಧಿಕಾರ ನನಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಅಧಿವೇಶನ ನಡೆಯಬಹುದು. ಇಲ್ಲಿ ನಡೆದರೆ ಬೆಳಗಾವಿಗೆ 600 ಅಧಿಕಾರಿಗಳು ಬರಬೇಕಾಗುತ್ತದೆ. ಕೋವಿಡ್ ಇದೆ ಎಂಬಿತ್ಯಾದಿ ಕಾರಣವನ್ನು ಅಧಿಕಾರಿಗಳು ಹೇಳಿದ್ದಾರೆ. ನೋಡೋಣ’ ಎಂದರು.

‘ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಸರ್ಕಾರದಿಂದಲೇ ಕನ್ನಡ ಧ್ವಜ ಹಾರಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಹಿತದ ಪ್ರಶ್ನೆ ಬಂದಾಗ ಜನಪ್ರತಿನಿಧಿಗಳೆಲ್ಲ ಒಂದಾಗಬೇಕು’ ಎಂದು ಹೇಳಿದರು.

‘ಮೇಕೆ ದಾಟು ಯೋಜನೆ ಸೇರದಿಂತೆ ನದಿ ನೀರು ಹಂಚಿಕೆ ವಿಚಾರವಿರಲಿ, ಗಡಿ ಸಮಸ್ಯೆ ಇರಲಿ ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಾರದು. ಬೇರೆ ರಾಜ್ಯಗಳಲ್ಲಿರುವ ಒಗ್ಗಟ್ಟು ನಮ್ಮಲ್ಲಿಲ್ಲದಿರುವುದನ್ನು 40 ವರ್ಷಗಳಿಂದಲೂ ನೋಡುತ್ತಿದ್ದೇನೆ. ರಾಜ್ಯಕ್ಕೆ ಅನ್ಯಾಯವಾದಾಗ ಸರಿಪಡಿಸಿಕೊಳ್ಳಲು ಒಗ್ಗಟ್ಟಾಗುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.

‘1ರಿಂದ 12ನೇ ತರಗತಿ ಮಕ್ಕಳ ಶಿಕ್ಷಣಕ್ಕೆ ಅಡೆತಡೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕೋವಿಡ್ ವೇಳೆಯಲ್ಲಿ ಸುಮ್ಮನೆ ಪಾಸ್ ಮಾಡುವುದು ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.