ಬೆಳಗಾವಿ: ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’ ಘೋಷವಾಕ್ಯದೊಂದಿಗೆ ನಗರದಲ್ಲಿ ಭಾನುವಾರ ನಡೆದ ಮ್ಯಾರಥಾನ್‌ಗೆ ಉತ್ತಮ ಸ್ಪಂದನೆ ಸಿಕ್ಕಿತು. ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಶಾಂತಿಯ ಕುರಿತು ಜಾಗೃತಿ ಮೂಡಿಸಿತು.
ವಾರಾಂತ್ಯದ ರಜೆಯ ಮೂಡ್‌ನಲ್ಲಿದ್ದ ಜನರು, ಇಲ್ಲಿನ ಸಿಪಿಇಡಿ ಮೈದಾನದಿಂದ ಆರಂಭಗೊಂಡ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಹೆಜ್ಜೆಹಾಕಿದರು. ರಾಜ್ಯ ಮತ್ತು ಹೊರರಾಜ್ಯಗಳ ಜನರಷ್ಟೇ ಅಲ್ಲದೆ; ವಿದೇಶಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಾರ್ವಜನಿಕರಿಗೆ ಏರ್ಪಡಿಸಿದ್ದ ಪುರುಷರ ವಿಭಾಗದ 10 ಕಿ.ಮೀ ಮ್ಯಾರಥಾನ್‌ನಲ್ಲಿ ಅನಿಕೇತ ಶಿಂಗಾರೆ ಪ್ರಥಮ, ಸುನೀಲ ಡಿ. ದ್ವಿತೀಯ, ಚೇತನ ಕಶ್ಯಪ್ ತೃತೀಯ, ಮಹಿಳೆಯರ ವಿಭಾಗದ 10 ಕಿ.ಮೀ ಮ್ಯಾರಥಾನ್‌ನಲ್ಲಿ ವೈಷ್ಣವಿ ರಾವಳ, ಅಕ್ಷತಾ ಮಜುಕರ, ನಕ್ಷಾ ಮಾಂಗಕರ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.
ಪುರುಷರ ವಿಭಾಗದ 5 ಕಿ.ಮೀ ಮ್ಯಾರಥಾನ್‌ನಲ್ಲಿ ತೇಜಸ್ ನೇಮಡೆ ಪ್ರಥಮ, ಭೂಷಣ ಕದಮ ದ್ವಿತೀಯ, ಗಣೇಶ ಹಿರೋಜಿ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ 5 ಕಿ.ಮೀ ಮ್ಯಾರಥಾನ್‌ನಲ್ಲಿ ಅಪೂರ್ವ ನಾಯ್ಕ ಪ್ರಥಮ, ಸೃಷ್ಟಿ ಜುವೇಕರ ದ್ವಿತೀಯ, ಅನಘಾ ಶಾನಭಾಗ ತೃತೀಯ ಬಹುಮಾನ ಪಡೆದರು.
ಪೊಲೀಸರಿಗೆ ಆಯೋಜಿಸಿದ್ದ 10 ಕಿ.ಮೀ ಮ್ಯಾರಥಾನ್‌ನಲ್ಲಿ ಮಹಾಂತೇಶ ದಮ್ಮನ್ನವರ ಪ್ರಥಮ, ದರಿಯಪ್ಪ ಬದನೂರ ದ್ವಿತೀಯ, ಸಂಗಪ್ಪ ಗೊರವರ ತೃತೀಯ, 5 ಕಿ.ಮೀ ಮ್ಯಾರಥಾನ್‌ನಲ್ಲಿ ಶಿವಾನಂದ ರಾಠೋಡ, ಲಕ್ಷ್ಮಣ ಉಳ್ಳೇಗಡ್ಡಿ, ರಮೇಶ ಮಬನೂರ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ವಿಜೇತರಿಗೆ ಗಣ್ಯರು ಬಹುಮಾನ ನೀಡಿ ಗೌರವಿಸಿದರು.
ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನ್ ಸಿಂಗ್ ರಾಠೋರ, ‘ಪೊಲೀಸರು ಒದಗಿಸುತ್ತಿರುವ ಜನಸ್ನೇಹಿ ಸೇವೆ, ಸಮಾಜದಲ್ಲಿ ಶಾಂತಿ ಕಾಪಾಡುವುದು ಮತ್ತು ಆರೋಗ್ಯದ ಕುರಿತು ಸಂದೇಶ ಸಾರಲು ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ’ ಎಂದರು.
ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ಮ್ಯಾರಥಾನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ. ಕರ್ನಾಟಕವನ್ನು ಮಾದಕವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಇದನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ನಗರ ಪೊಲೀಸ್ ಉಪ ಆಯುಕ್ತರಾದ ರೋಹನ್ ಜಗದೀಶ, ಸಿದ್ಧನಗೌಡ ಪಾಟೀಲ, ನಿರಂಜನ್ ರಾಜೇ ಅರಸ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.