ADVERTISEMENT

ಬೆಳವಡಿ ಮಲ್ಲಮ್ಮ ಮತ್ತೊಮ್ಮೆ ಹುಟ್ಟಿ ಬರಲಿ: ಸಾಹಿತಿ ಡಾ.ಶಕುಂತಲಾ ಸಿಂಧೂರ ಆಶಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:55 IST
Last Updated 2 ಮಾರ್ಚ್ 2024, 5:55 IST
ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಅಂಗವಾಗಿ ಗುರುವಾರ ನಡೆದ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು
ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಅಂಗವಾಗಿ ಗುರುವಾರ ನಡೆದ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು   

ಬೈಲಹೊಂಗಲ: ‘ತೊಟ್ಟಿಲು ತೂಗುವ ಕೈ ಒಂದು ಸಾಮ್ರಾಜ್ಯ ಕಟ್ಟಿ ಉತ್ತಮ ಆಡಳಿತ ನಡೆಸುವುದಷ್ಟೇ ಅಲ್ಲದೆ ಶೌರ್ಯ, ಪರಾಕ್ರಮ ಶೂರತ್ವ ತೋರಬಲ್ಲಳು ಎಂಬುದಕ್ಕೆ ಬೆಳವಡಿ ಮಹಾರಾಣಿ ಮಲ್ಲಮ್ಮನ ನಾಡಾಭಿಮಾನದ ಭವ್ಯ ಇತಿಹಾಸ ನಮ್ಮ ಕಣ್ಣ ಮುಂದಿದೆ' ಎಂದು ಖ್ಯಾತ ಸಾಹಿತಿ ಗದುಗಿನ ನಿವೃತ್ತ ಪ್ರಾಧ್ಯಾಪಕಿ ಡಾ.ಶಕುಂತಲಾ ಸಿಂಧೂರ ಹೇಳಿದರು.

ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಳವಡಿ ಮಲ್ಲಮ್ಮ ಉತ್ಸವ 2024ರ ಅಂಗವಾಗಿ ಗುರುವಾರ ನಡೆದ ವಿಚಾರ ಸಂಕಿರಣದಲ್ಲಿ ಬೆಳವಡಿ ಸಂಸ್ಥಾನದ ಸಮಕಾಲೀನ ಸಂಸ್ಥಾನಗಳು ಮತ್ತು ರಾಣಿಯರು ವಿಷಯ ಕುರಿತು ಅವರು ಮಾತನಾಡಿದರು.

'ಬೆಳವಡಿ ಆಯಸ್ಕಾಂತ, ಬೆಳವಡಿ ಬೆಳಕು, ವೀರ ಸಿಂಹಿಣಿ, ಬೆಳವಲ ನಾಡಿನ ಸಮರಾಂಗಿಣಿ, ಸ್ತ್ರೀ ಕುಲಕ್ಕೆ ಕಿರೀಟ ಪ್ರಾಯವಾದ ಚರಿತ್ರೆಯನ್ನು ಹೊಂದಿರುವ ವೀರರಾಣಿ ಮಲ್ಲಮ್ಮ ಮತ್ತೊಮ್ಮೆ ಹುಟ್ಟಿ ಬರಲಿ' ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

ಸಾಹಿತಿ ವಿಮರ್ಶಕ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ‘ನಾಡಿನಲ್ಲಿ ಬೆಳವಡಿ ಮಲ್ಲಮ್ಮ ಇತಿಹಾಸದ ಕುರಿತಾಗಿ ಚಿಂತನೆಗಳು ನಡೆಯುತ್ತಿವೆ. ಹಿಂದವಿ ಸಾಮ್ರಾಜ್ಯದ ಸಾಮ್ರಾಟ ಶಿವಾಜಿ ಮಹಾರಾಜರ ಬಲಿಷ್ಟ ಸೈನ್ಯವನ್ನು ಎರಡು ಸಾವಿರ ಮಹಿಳೆಯರ ಸೈನ್ಯದ ಬಲದಿಂದ ಹಿಮ್ಮೆಟ್ಟಿಸಿ ಮೆಚ್ಙುಗೆ ಪಡೆದ ಮಹಾನ ಹೋರಾಟಗಾರ್ತಿ ಬೆಳವಡಿ ಮಲ್ಲಮ್ಮ. ಆಕೆಯ ಯಶೋಗಾಥೆಯ ಇತಿಹಾಸ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಉತ್ಸವದಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ಮರಣೀಯವಾಗಿದೆ' ಎಂದರು.

ಖ್ಯಾತ ಸಾಹಿತಿ ಯು.ರು.ಪಾಟೀಲ, ವಕೀಲ ಎಫ್.ಎಸ್.ಸಿದ್ದನಗೌಡರ, ‘ಬೀಳದ ಬೆಳವಡಿ ಆ ಇಪ್ಪತ್ತೇಳು ದಿನಗಳು’ ಕಾದಂಬರಿಕಾರ ರಾಮಣ್ಣ ತಟ್ಟಿ ಮಾತನಾಡಿದರು.

ಬಳ್ಳಾರಿ ಎಸ್.ಜೆ.ಪಿ.ಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಸಂತೋಷ ಯಕ್ಕುಂಡಿ ಬೆಳವಡಿ ಉತ್ಸವ ನಡೆದು ಬಂದ ದಾರಿ ಕುರಿತು ಸುದೀರ್ಘವಾಗಿ ಮಾತನಾಡಿದರು. ಬೆಳವಡಿ ಸಂಸ್ಥಾನ ರಾಜಗುರು ಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಎಸಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ್‌ ಸಚ್ಚಿದಾನಂದ ಕುಚನೂರ ಇದ್ದರು. ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹಮಾನ ನೀಡಿ ಸತ್ಕರಿಸಲಾಯಿತು.

ಶಿಕ್ಷಕ ವೀರೇಶ ಕಾಡೇಶನವರ ನಿರೂಪಿಸಿದರು. ವಕೀಲ ಸಿ.ಎಸ್.ಚಿಕ್ಕನಗೌಡರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಶಿಕ್ಷಕ ಶಿವಾನಂದ ಹುಂಬಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ, ಬೆಳವಡಿ, ಬುಡರಕಟ್ಟಿ ವಲಯ ಮಟ್ಟದ ಪ್ರಾಥಮಿಕ ಪ್ರೌಢಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.