
ಬೈಲಹೊಂಗಲ: 'ರಾಜ್ಯದಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆ ಮೂಂಚೂಣಿಯಲ್ಲಿ ಇದೆ' ಎಂದು ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್ ಹೇಳಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ನಡೆದ 50 ಹಾಸಿಗೆಗಳ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಯೂನಿಟ್) ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
'ಪ್ರತಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆ ರೀತಿಯಲ್ಲಿ ನಿರ್ವಹಣೆಯಾದರೆ ರೋಗಿಗಳ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆರಿಸುವ ಉದ್ದೇಶದಿಂದ ನೂತನವಾಗಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ ಮಾಡಲಾಗಿದೆ’ ಎಂದರು.
‘ಬಡತನ ನಿವಾರಣೆ, ಸಾಮಾಜಿಕ ನ್ಯಾಯ ಕಲ್ಪಿಸಲು ಗ್ಯಾರಂಟಿ ಯೋಜನೆಗಳ ಮೂಲಕ ಮಾದರಿ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಬೆಳಗಾವಿ ಜಿಲ್ಲೆಗೆ ಸುಮಾರು ₹300 ಕೋಟಿ ಅನುದಾನ ಈಗಾಗಲೇ ಸರ್ಕಾರ ಒದಗಿದ್ದು, ರಾಜ್ಯಕ್ಕೆ ಸರ್ಕಾರ ಸಾಕಷ್ಟು ವೈದ್ಯಕೀಯ ಸೇವೆ ಕೊಡುಗೆಯಾಗಿ ನೀಡಿದೆ' ಎಂದು ಹೇಳಿದರು.
'50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ ಬೈಲಹೊಂಗಲ ತಾಲ್ಲೂಕಿಗೆ ಅತ್ಯವಶ್ಯವಾಗಿದೆ. ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 200 ಹೆರಿಗೆ ಆಗುತ್ತಿವೆ. ಸಾರ್ವಜನಿಕರ ಯಾವುದೇ ಸಮಸ್ಯೆ ಕೇಳಿಬರುತ್ತಿಲ್ಲ. ಸ್ಥಳೀಯವಾಗಿ ಹೆಚ್ಚಿನ ವೈದ್ಯಕೀಯ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ಪುನೀತ್ ರಾಜಕುಮಾರ ಹೃದಯ ಜ್ಯೋತಿ, ಟೆಲಿ ಐಸಿಯು, ಗೃಹ ಆರೋಗ್ಯ ಯೋಜನೆ ಕೂಡ ಜಾರಿಯಲ್ಲಿದೆ. ಸ್ಥಳೀಯ ಶಾಸಕರ ಬೇಡಿಕೆಯಂತೆ ಆಸ್ಪತ್ರೆ ಕಾಂಪೌಂಡ್ ನಿರ್ಮಿಸಲು ಅಗತ್ಯವಿರುವ ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು' ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, '50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಸುಮಾರು ₹23 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸುಮಾರು 7 ವರ್ಷಗಳ ಹಿಂದೆ 110 ಒಪಿಡಿಗಳು ಮಾತ್ರ ನೋಂದಣಿಯಾಗುತ್ತಿದ್ದವು. ಈಗ 800ಕ್ಕೂ ಅಧಿಕ ಒಪಿಡಿ ನೋಂದಣಿಯಾಗುತ್ತಿವೆ. ಸಾರ್ವಜನಿಕರಿಂದ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಆಂಬ್ಯುಲೆನ್ಸ್ ಸುತ್ತುವ ವ್ಯಾಪ್ತಿ ದೊಡ್ಡದಾಗಿದ್ದು, ತಿಂಗಳ ಇಂಧನ ವೆಚ್ಚ ಮಿತಿ ಹೆಚ್ಚಿಸಬೇಕು. ಈಗಾಗಲೇ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣದ ಗುತ್ತಿಗೆದಾರಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಸೂಚಿಸಲಾಗಿದೆ' ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಕೆ.ಎಸ್.ಆರ್.ಟಿ.ಸಿ ರಾಜ್ಯ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಬೈಲಹೊಂಗಲ ತಹಶೀಲ್ದಾರ್ ಹನುಮಂತ ಶಿರಹಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ, ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರ ಜಕನೂರ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.