ADVERTISEMENT

ಅತಿವೃಷ್ಟಿ ಕಾರಣ ಪರಿಹಾರ ವಿತರಣೆಯಲ್ಲಿ ಬೆಳಗಾವಿಯೇ ನಂಬರ್‌ ಒನ್‌: ಗೋವಿಂದ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 12:51 IST
Last Updated 15 ಆಗಸ್ಟ್ 2022, 12:51 IST
ಬೆಳಗಾವಿಯಲ್ಲಿ ಸೋಮವಾರ ಸಚಿವ ಗೋವಿಂದ ಕಾರಜೋಳ ಅವರು ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು
ಬೆಳಗಾವಿಯಲ್ಲಿ ಸೋಮವಾರ ಸಚಿವ ಗೋವಿಂದ ಕಾರಜೋಳ ಅವರು ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು   

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿ ಕಾರಣ ಈವರೆಗೆ 800 ಮನೆಗಳಿಗೆ ಹಾನಿಯಾಗಿದ್ದು, ಈಗಾಗಲೇ 276 ಕುಟುಂಬದವರಿಗೆ ₹ 1.94 ಕೋಟಿ ಪರಿಹಾರ ವಿತರಿಸಲಾಗಿದೆ. ಹಾನಿ ಸಂಭವಿಸಿದ 24 ಗಂಟೆಗಳಲ್ಲೇ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

2021ರಲ್ಲಿ ಅತಿವೃಷ್ಟಿ, ಪ್ರವಾಹದಿಂದ 1.50 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 1,18,348 ರೈತರಿಗೆ ₹ 192.10 ಕೋಟಿ ಮೊತ್ತದ ಪರಿಹಾರ ಜಮೆ ಮಾಡಲು ದೃಢೀಕರಣ ಮಾಡಲಾಗಿದೆ. ಒಟ್ಟು 14,545 ಮನೆಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಈವರೆಗೆ 14,545 ಮನೆಗಳಿಗೆ ₹ 115 ಕೋಟಿ ಪರಿಹಾರ ನೀಡಲಾಗಿದೆ. 2020ರಲ್ಲಿ ₹ 70.44 ಕೋಟಿ, 2019ರಲ್ಲಿ ₹ 828.67 ಕೋಟಿ ಪರಿಹಾರ ನೀಡಲಾಗಿದೆ.

ADVERTISEMENT

ಜಿಲ್ಲೆಯಲ್ಲಿ 36,42,909 ಜನರಿಗೆ ಕೋವಿಡ್‌ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶೇ 102.16ರಷ್ಟು ಪ್ರಗತಿ ಸಾಧಿಸಲಾಗಿದೆ. 2ನೇ ಡೋಸ್ 37,25,830 ಜನರಿಗೆ ನೀಡಲಾಗಿದೆ. ಶೇ 104.86ರಷ್ಟು ಪ್ರಗತಿ ಸಾಧಿಸಲಾಗಿದೆ. ಈಗಲೂ ಅಗತ್ಯಚಿಕಿತ್ಸೆಗೆ ಬೇಕಾದ ಸೌಕರ್ಯಗಳನ್ನು ಸಿದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದರು.

ಸ್ಮಾರ್ಟ್‌ಸಿಟಿ: ‘ಸ್ಮಾರ್ಟಸಿಟಿ’ ಯೋಜನೆಯ ಮೊದಲ ಹಂತದಲ್ಲಿ ಆಯ್ಕೆಯಾದ ದೇಶದ 20 ಪ್ರಮುಖ ನಗರಗಳಲ್ಲಿ ಬೆಳಗಾವಿಯೂ ಒಂದು. ಪ್ರಸ್ತುತ 100 ಸ್ಮಾರ್ಟ್‌ ನಗರಗಳ ಪೈಕಿ ಬೆಳಗಾವಿಗೆ 9ನೇ ಸ್ಥಾನವಿದೆ. ವಿಶ್ವಸಂಸ್ಥೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಅರ್ಬನ್ ಅಫೇರ್ಸ್ ಏರ್ಪಡಿಸಿದ ಸರ್ವತೋಮುಖ ನಗರ ಸ್ಪರ್ಧೆ-2022ರ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜಿನಲ್ಲಿ ಅಗ್ರಸ್ಥಾನ ಗಳಿಸಿದೆ. ಈವರೆಗೆ ₹ 930 ಕೋಟಿ ಅನುದಾನದಡಿ 103 ವಿವಿಧ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. 51 ಕಾಮಗಾರಿ ಪೂರ್ಣಗೊಳಿಸಲಾಗಿದ್ದು, 52 ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿವೆ ಎಂದರು.

ಪಥ ಸಂಚಲನ: ಕೆಎಸ್‍ಆರ್‌ಪಿ, ಸಶಸ್ತ್ರ ಪೊಲೀಸ್ ಪಡೆ, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಕರ್ನಾಟಕ ಅಗ್ನಿ ಶಾಮಕದಳ, ಜಿಲ್ಲಾ ಅಬಕಾರಿ ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್ ತಂಡ ಹಾಗೂ ವಿವಿಧ ಶಾಲಾ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡಿದರು.

ಸಂಸದೆ ಮಂಗಳಾ ಅಂಗಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ., ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಅಭಿವೃದ್ಧಿಯ ಅಂಕಿ ಅಂಶ

* ರೈತ ವಿದ್ಯಾನಿಧಿ ಅಡಿ 85,849 ಮಕ್ಕಳಿಗೆ ₹ 31 ಕೋಟಿ ಶಿಷ್ಯವೇತನ

* 5.64 ಲಕ್ಷ ರೈತರಿಗೆ ₹ 1587 ಕೋಟಿ ಕಿಸಾನ್‌ ಸಮ್ಮಾನ್‌ ನಿಧಿ

* ಕೃಷಿ ಸಿಂಚಾಯಿ ಯೋಜನೆಯಡಿ ₹ 19.59 ಕೋಟಿ ಅನುದಾನ

* 3069 ರೈತರಿಗೆ ₹ 16.16 ಕೋಟಿ ಬೆಳೆ ವಿಮೆ ವಿತರಣೆ

* 7.64 ಲಕ್ಷ ಉದ್ಯೋಗ ಚೀಟಿ ನೀಡಿ,125 ಲಕ್ಷ ಮಾನವ ದಿನಗಳ ಸೃಜನೆ

* ಒಂಬತ್ತು ಏತ ನೀರಾವರಿ ಯೋಜನೆಗಳಿಗೆ ₹ 4,937 ಕೋಟಿ ವೆಚ್ಚ

ಯುವತಿ, ಮಹಿಳೆಯರ ಬಂಧನ, ಬಿಡುಗಡೆ

ಬೆಳಗಾವಿ: ತೋಟಗಾರಿಕಾ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸಚಿವರ ಮುಂದೆ ಪ್ರತಿಭಟನೆಗೆ ಮುಂದಾದ ಚನ್ನ‍ಪಟ್ಟಣದ ಯುವತಿ ಹಾಗೂ ಅವರ ಬೆಂಬಲಕ್ಕೆ ಬಂದ ಮಹಿಳೆಯರನ್ನು ಪೊಲೀಸರು ಮುಂಚಿತವಾಗಿಯೇ ವಶಕ್ಕೆ ‍ಪಡೆದರು.
ಟಾಕಳೆ ವಿರುದ್ಧಅತ್ಯಾಚಾರ, ಗರ್ಭಪಾತ, ಹಲ್ಲೆ, ಅಪಹರಣ, ಖಾಸಗಿ ವಿಡಿಯೊ ಹರಿಬಿಟ್ಟಿದ್ದೂ ಸೇರಿದಂತೆ 12 ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಆದರೂ ಪೊಲೀಸರು ಇನ್ನೂ ಬಂಧಿಸಿಲ್ಲ. ಇದನ್ನು ಖಂಡಿಸಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಯುವತಿ ಸಿದ್ಧತೆ ನಡೆಸಿದ್ದರು.ಚನ್ನಮ್ಮ ವೃತ್ತದಲ್ಲೇ ಅವರನ್ನು ವಶಕ್ಕೆ ಪಡೆದ ಎಪಿಎಂಸಿ ಠಾಣೆ ಪೊಲೀಸರು ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.