ADVERTISEMENT

368 ಪೌರ ಕಾರ್ಮಿಕರಿಗೆ ಕಾಯಮಾತಿ ಆದೇಶ ಪತ್ರ ವಿತರಿಸಿದ ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 15:17 IST
Last Updated 2 ಜನವರಿ 2024, 15:17 IST
<div class="paragraphs"><p>ಬೆಳಗಾವಿಯಲ್ಲಿ ಮಂಗಳವಾರ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ರಹೀಂಖಾನ್‌ ಅವರು ಪೌರಕಾರ್ಮಿಕರಿಗೆ ಕಾಯಮಾತಿ ಆದೇಶಪತ್ರ ನೀಡಿದರು–ಪ್ರಜಾವಾಣಿ&nbsp;ಚಿ</p></div>

ಬೆಳಗಾವಿಯಲ್ಲಿ ಮಂಗಳವಾರ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ರಹೀಂಖಾನ್‌ ಅವರು ಪೌರಕಾರ್ಮಿಕರಿಗೆ ಕಾಯಮಾತಿ ಆದೇಶಪತ್ರ ನೀಡಿದರು–ಪ್ರಜಾವಾಣಿ ಚಿ

   

ಬೆಳಗಾವಿ: ‘ಸ್ವಚ್ಛತೆ ವಿಚಾರದಲ್ಲಿ ಜಗತ್ತು ಈಗ ಸಾಕಷ್ಟು ಮುಂದುವರಿದಿದೆ. ಆದರೆ, ನಮ್ಮಲ್ಲಿ ಇನ್ನೂ ಗುಂಡಿಗೆ ಇಳಿದು ಸ್ವಚ್ಛ ಮಾಡುವಂಥ ಅನಿಷ್ಠ ಪದ್ಧತಿ ಅಲ್ಲಲ್ಲಿ ಕಾಣಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತ‍ಪಡಿಸಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಕಾಯಮಾತಿ ಆದೇಶಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಪೌರಕಾರ್ಮಿಕರಿಗೆ ತಾಂತ್ರಿಕ ಸಲಕರಣೆ ವಿತರಣೆ, ಸಮವಸ್ತ್ರ, ಆರೋಗ್ಯ ಕಾಳಜಿ ಸೇರಿದಂತೆ ಇನ್ನೂ ಹಲವು ಸೌಕರ್ಯಗಳನ್ನು ನೀಡಬೇಕಿದೆ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಸಶಕ್ತೀಕರಣಕ್ಕೆ ಕೆಲಸ ಮಾಡಲಿದೆ’ ಎಂದರು.

‘ಸದ್ಯ 368 ಮಂದಿಗೆ ಕಾಯಂ ಮಾಡಿ ಆದೇಶಪತ್ರ ನೀಡಲಾಗಿದೆ. ಇದಕ್ಕೆ ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಗಳೆರಡೂ ಕಾರಣ. ಇನ್ನೂ 400 ಜನರ ಕಾಯಮಾತಿ ಬಾಕಿ ಇದೆ. ಅದನ್ನು ಶೀಘ್ರ ಮಾಡಲಾಗುವುದು. ಪೌರಕಾರ್ಮಿಕರು ಸೇವಾಭಾವದಿಂದ ದುಡಿದ ಕಾರಣ ನಗರ ಇಂದು ಸ್ವಚ್ಛವಾಗಿ ಕಾಣಿಸುತ್ತಿದೆ’ ಎಂದರು.

ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಂಖಾನ್‌ ಮಾತನಾಡಿ, ‘ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಪೌರಕಾರ್ಮಿಕರ ಕಾಯಮಾತಿ ಆದೇಶ ನೀಡಿದ್ದರು. ಈಗ ಅವರೇ ಅದನ್ನು ಜಾರಿಗೊಳಿಸಿದ್ದಾರೆ. ಪೌರಕಾರ್ಮಿಕರು ಬಡವರು. ಆದರೆ, ಅವರ ಹೃದಯ ಶ್ರೀಮಂತ’ ಎಂದರು.

‘ಸ್ಥಳೀಯ ಸಂಸ್ಥೆಗಳು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು. ತೆರಿಗೆ ಸಂಗ್ರಹ ಮತ್ತಿತರ ಸ್ಥಳೀಯ ಸಂಪನ್ಮೂಲ ಸಂಗ್ರಹಿಸಿ ಅಭಿವೃದ್ಧಿಯತ್ತ ನಡೆಯಬೇಕು. ಸರ್ಕಾರದ ಮೇಲೆ ಅವಲಂಬನೆ ಕಡಿಮೆಯಾಗಬೇಕು’ ಎಂದೂ ಸಲಹೆ ನೀಡಿದರು.

ಶಾಸಕ ಆಸೀಫ್‌ ಸೇಠ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಎಸ್ಪಿ ಡಾ.ಭೀಮಾಶಂಕರ ಗುಳೇದ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ರವಿ ಧೋತ್ರೆ, ಆಡಲಿತ ಪಕ್ಷದ ಮುಖಂಡ ರಾಜಶೇಖರ ಡೋಣಿ ಇದ್ದರು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಕಾಯಮಾತಿ ಆದೇಶಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಪೌರ ಕಾರ್ಮಿಕರು–ಪ್ರಜಾವಾಣಿ ಚಿ

‘ಮುಪ್ಪಿನ ಜೀವಕ್ಕ ಆಸರೆ ಆತು...’

‘ನಾನು ಒಂಟಿ ಜೀವ. 25 ವರ್ಷ ಆಗಿತ್ತು. ಪೌರಕಾರ್ಮಿಕಳಾಗಿ ದುಡಿಲಾಕತ್ತೀನಿ. ನನಗೀಗ 50ರ ಆಸುಪಾಸು ವಯಸ್ಸು. ಮುಪ್ಪಿನ ಕಾಲಕ್ಕೆ ಸಗತಿ ನಿಂತ ಮ್ಯಾಲ್‌ ಬದುಕು ಹೆಂಗಪಾ ಅಂತ ಚಿಂತ್ಯಾಗಿತ್ತು. ಸರ್ಕಾರ ನಮ್ಮನ್ನ ಕಾಯಂ ಮಾಡೇತಿ. ಜೀವಕ್ಕ ಆಸರೆ ಸಿಕ್ಕಂಗ ಆತು...’

‍ಪೌರಕಾರ್ಮಿಕ ಮಹಿಳೆ ನೀಲವ್ವ ಕಬ್ಬೂರ ಅವರು ತಮ್ಮ ಖುಷಿ ಹಂಚಿಕೊಂಡಿದ್ದು ಹೀಗೆ. ಬೆಳಗಾವಿಯಲ್ಲಿ ಮಂಗಳವಾರ ಕಾಯಮಾತಿ ಆದೇಶಪತ್ರ ಪಡೆದ ಅವರ ಮುಖದಲ್ಲಿ ಇನ್ನಿಲ್ಲದ ಆನಂದ ಹೊರಚಿಮ್ಮಿತು. ಇಷ್ಟು ವರ್ಷಗಳ ಹೋರಾಟ, ಇಷ್ಟು ವರ್ಷಗಳ ಸೇವೆಗೆ ಕೊನೆಗೂ ಫಲ ಸಿಕ್ಕಿತು ಎಂಬ ಸಮಾಧಾನ ಆ ಹಿರಿಯ ಜೀವದ ಕಣ್ಣುಗಳಲ್ಲಿ ಕಂಡುಬಂತು.

16 ವರ್ಷಗಳಿಂದ ಮೂಡಲಗಿಯಲ್ಲಿ ಪೌರಕಾರ್ಮಿಕ ಆಗಿರುವ ಲೇಖಾ ಕೌಂಟಕೊಪ್ಪ ಅವರದು ಇನ್ನೊಂದು ರೀತಿಯ ಸಂಭ್ರಮ. ಇವರ ಮನೆಯಲ್ಲಿ ಇಬ್ಬರು ಸೇವೆ ಸಲ್ಲಿಸುತ್ತಿದ್ದು ಇಬ್ಬರೂ ಕಾಯಂ ಆಗಿದ್ದಾರೆ. ಇದರಿಂದ ತಮ್ಮ ಭವಿಷ್ಯ, ಮಕ್ಕಳ ಭವಿಷ್ಯ ಸುಂದರವಾಗಲಿದೆ ಎಂಬ ಕನಸು ಕಂಡಿದ್ದಾರೆ.

‘ಈ ಮೊದ್ಲು ಕೇವಲ ₹12 ಸಾವಿರ ‍ಪಗಾರ ಇತ್ರಿ. ಈಗ ‘ಪರ್ಮನೆಂಟ್‌’ ಮಾಡ್ಯಾರ ಅಂತ ಕೇಳಿ ಖುಷಿ ಆತು. ಪಗಾರ್‌ ಹೆಚ್ಚಾಕ್ಕದ ಅಂತ ಹೇಳ್ಯಾರ. ಎಷ್ಟ್‌ ಅಕ್ಕದ ಅಂತ ಗೊತ್ತಿಲ್ಲ. ಆದ್ರ ನಾವೂ ಸರ್ಕಾರಿ ನೌಕರರು ಅಂತ ಹೆಮ್ಮೆಯಿಂದ ಹೇಳಕೋತೇವ್‌’ ಎನ್ನುವುದು ಚಿಕ್ಕೋಡಿಯ ರಾಮಚಂದ್ರ ಮದಲಟ್ಟಿ ಅವರ ಮಾತು.

‘ಕೆಲಸ ಮಾಡುವಾಗ ಅಕಸ್ಮಾತ್‌ ಸತ್ರ ನಮ್ಮ ನಂಬಿಕೊಂಡವರಿಗೆ ಏನೂ ಸಿಗತಿರಕ್ಕಿಲ್ಲ. ಈಗ ನಾವೂ ಸರ್ಕಾರಿ ನೌಕರ ಆಗೇವಿ. ಬಾಳ್‌ ಧೈರ್ಯ ಬಂದೈತಿ. ಮನೆತನ ಗಟ್ಟಿ ಆದಂಗಾತು. ಹಿಂದಿನ ಸರ್ಕಾರಕ್ಕ ಮತ್ತ ಈಗಿನ ಸರ್ಕಾರಕ್ಕ ಶರಣ ಹೇಳತೇನರಿ’ ಅಂದರು ಮೂಡಲಗಿಯ ಯಶವಂತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.