
ಬೈಲಹೊಂಗಲ: ‘ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ಯೋಜನೆಯಡಿ 2026 ಮುಗಿಯುವುದರಲ್ಲಿ ರಾಜ್ಯದಲ್ಲಿ ಒಟ್ಟು 2.30 ಲಕ್ಷ ಮನೆಗಳ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ. ಬೈಲಹೊಂಗಲಕ್ಕೆ 400 ಮನೆಗಳನ್ನು 3ನೇ ಹಂತದಲ್ಲಿ ನಿರ್ಮಿಸಿ ಕೊಡುತ್ತೇವೆ’ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರಅಹ್ಮದ ಖಾನ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಜಿಲ್ಲಾಡಳಿತ ಬೆಳಗಾವಿ ಹಾಗೂ ಪುರಸಭೆ ಸಹಯೋಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಳಗಾವಿಯಿಂದ ಬೈಲಹೊಂಗಲ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ನಗರಸಭೆ ನಾಮಫಲಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ನಾವು ಘೋಷಣೆ ಮಾಡಿರಲಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ನೀಡುತ್ತಿದ್ದರೂ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಬದ್ಧತೆ. ಹಂತ-ಹಂತವಾಗಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ಅದರಲ್ಲಿ 1ನೇ ಹಂತವಾಗಿ 36,780 ಮನೆಗಳನ್ನು ನಿರ್ಮಿಸಿದ್ದೇವೆ. 2ನೇ ಹಂತ ಬರುವ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ರಾಷ್ಟ್ರೀಯ, ರಾಜ್ಯದ ನಾಯಕರಿಂದ 42,345 ಮನೆಗಳನ್ನು ವಿತರಣಾ ಕಾರ್ಯಕ್ರಮ ಮಾಡುತ್ತೇವೆ. ಮೂರನೇ ಹಂತ ಮೇ ತಿಂಗಳಿನಲ್ಲಿ ಉಳಿದ ಮನೆಗಳನ್ನು ನೀಡುತ್ತೇವೆ ಎಂದರು.
ಬೈಲಹೊಂಗಲದಲ್ಲಿ ಒಟ್ಟು 2,363 ಮನೆಗಳ ಹಕ್ಕುಪತ್ರ ಕೊಡಬೇಕಾಗಿತ್ತು. ಈಗಾಗಲೇ ಅದರಲ್ಲಿ 1664 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಅನೇಕ ವರ್ಷಗಳಿಂದ 729 ಹಕ್ಕುಪತ್ರ ವಿತರಿಸುವುದು ಬಾಕಿಯಿತ್ತು. ಅದರಲ್ಲಿ ಈಗ 699 ಹಕ್ಕುಪತ್ರ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಉಳಿದ 30 ಮನೆಗಳ ಹಕ್ಕುಪತ್ರಗಳನ್ನು ಆದಷ್ಟು ಬೇಗ ಕೊಡಲಾಗುವುದು ಎಂದು ಭರವಸೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಬೈಲಹೊಂಗಲಕ್ಕೆ ಬಂದಾಗ ಯಕ್ಕುಂಡಿ ಪೀರ ದಿಲಾವರ ಗೋರಿ ದರ್ಗಾಕ್ಕೆ ಭೇಟಿ ನೀಡಿದ್ದೆ. ದರ್ಗಾದ ಅಭಿವೃದ್ಧಿಗಾಗಿ ಅನುದಾನದ ಭರವಸೆ ನೀಡಿದ್ದೆ, ಅದರಂತೆ ಶಾಸಕ ಮಹಾಂತೇಶ ಕೌಜಲಗಿ ಅವರು ಭೇಟಿಯಾಗಿ ಹೊಸ ಎಸ್ಟಿಮೆಂಟ್ ಕಾಫಿ ತಂದು ₹3 ಕೋಟಿ ಮಂಜೂರು ಮಾಡಿಸಿಕೊಂಡಿದ್ದಾರೆ. ಇನ್ನೂ ಒಂದೂವರೆ ಕೋಟಿ ಬೇಕಾದರೂ ಕೊಡುತ್ತೇನೆ ಎಂದರು.
₹2.40 ಕೋಟಿ ಎಲ್ಲ ವಕ್ಫ್ ಬೋರ್ಡ್ ಮಸೀದಿಗಳಿಗೆ, ₹50 ಲಕ್ಷ ಶಾದಿ ಮಹಲ್, ₹50 ಲಕ್ಷ ಜೈನ್ ಸಮಾಜಕ್ಕೆ ಅನುದಾನ ಮಂಜೂರು ಮಾಡಿದ್ದು, ಆದೇಶ ಪ್ರತಿಗಳನ್ನು ಶಾಸಕ ಮಹಾಂತೇಶ ಕೌಜಲಗಿ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರು, ಜನರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಕೊಟ್ಟ ಮಾತನ್ನು ನೆರವೇರಿಸಿ ಜನಪರ ಆಡಳಿತ ಒದಗಿಸುತ್ತಿದ್ದೇವೆ. ಮತಕ್ಷೇತ್ರದಲ್ಲಿ ಬಡವರಿಗೆ ಮನೆಗಳು ದೊರಕಬೇಕಾದರೆ, ಹಕ್ಕುಪತ್ರಗಳು ಸಿಗಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮಾತ್ರ ಸಾಧ್ಯವಾಗಿದೆ. ಒಟ್ಟು 699 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಈಗಾಗಲೇ ಸಾಂಕೇತಿಕವಾಗಿ 100 ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಉಳಿದವರು ಪುರಸಭೆಯವರು ಭೇಟಿ ನೀಡಿ ಹಕ್ಕುಪತ್ರ ಪಡೆದುಕೊಳ್ಳಬಹುದು ಎಂದರು.
ಶಾಸಕ ಆಸೀಫ್ ಶೇಠ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಟಿ. ರಾಘವೇಂದ್ರ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಮುಖ್ಯಾಧಿಕಾರಿ ವಿರೇಶ ಹಸಬಿ, ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯಾ ಹಿರೇಮಠ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕ ಅಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ ಇದ್ದರು.
ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಬುಡ್ಡೇಸಾಬ ಶೀರಸಂಗಿ, ಅಮೀರಾಬಿ ಬಾಗವಾನ, ಹೇಮಲತಾ ಹಿರೇಮಠ, ದಿಲಶಾದ ನದಾಫ, ಅಂಬಿಕಾ ಕೋಟಬಾಗಿ, ಶಶಿಕಲಾ ಹೊಸಮನಿ ಸೇರಿದಂತೆ ಪುರಸಭೆಯ ಸರ್ವ ಸಿಬ್ಬಂದಿ ಇದ್ದರು.
ನಂದೆಮ್ಮ ನಗರ, ಹರಳಯ್ಯ ಕಾಲೊನಿ, ಬಸವೇಶ್ವರ ಆಶ್ರಯ ನಗರ ಮತ್ತು ಗಂಗೆ ಗೌರಿ ಮಡ್ಡಿ ಕೊಳಗೇರಿ ಪ್ರದೇಶಗಳ ಒಟ್ಟು 699 ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.
ಪುರಸಭೆಯು ನಗರಸಭೆ ಆಗಿ ಮೇಲ್ದರ್ಜೆಗೇರಿದ್ದರಿಂದ ನೂತನ ನಗರಸಭೆ ಕಾರ್ಯಾಲಯ ಫಲಕ ಉದ್ಘಾಟಿಸಲಾಯಿತು. ಸಚಿವರನ್ನು ಪುರಸಭೆಯಿಂದ ಪೌರ ಸನ್ಮಾನ ಮಾಡಿ ಗೌರವಿಸಲಾಯಿತು. ಮುಖ್ಯಾಧಿಕಾರಿ ವೀರೇಶ ಹಸಬಿ ಸ್ವಾಗತಿಸಿದರು. ಶಿಕ್ಷಕಿ ಎಂ.ಐ. ಅಂಗಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.