ADVERTISEMENT

ಮಲಪ್ರಭೆಯಲ್ಲಿ ಪ್ರವಾಹ ಭೀತಿ

ಕ್ಷಣ ಕ್ಷಣಕ್ಕೂ ಏರುತ್ತಿರುವ ನದಿ ನೀರಿನ ಮಟ್ಟ,

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 4:36 IST
Last Updated 24 ಜುಲೈ 2021, 4:36 IST
ಪ್ರವಾಹ ಆವರಿಸುವ ಸಾಧ್ಯತೆಯಿಂದ ಮುಂಜಾಗ್ರತಾ ಕ್ರಮವಾಗಿ ಬೇರೆ ಸ್ಥಳಗಳಿಗೆ ತೆರಳುತ್ತಿರುವ ಎಂ.ಕೆ.ಹುಬ್ಬಳ್ಳಿ ಸಮೀಪದ ನದಿ ತೀರದ ನಿವಾಸಿಗಳು
ಪ್ರವಾಹ ಆವರಿಸುವ ಸಾಧ್ಯತೆಯಿಂದ ಮುಂಜಾಗ್ರತಾ ಕ್ರಮವಾಗಿ ಬೇರೆ ಸ್ಥಳಗಳಿಗೆ ತೆರಳುತ್ತಿರುವ ಎಂ.ಕೆ.ಹುಬ್ಬಳ್ಳಿ ಸಮೀಪದ ನದಿ ತೀರದ ನಿವಾಸಿಗಳು   

ಎಂ.ಕೆ.ಹುಬ್ಬಳ್ಳಿ: ವರುಣನ ಆರ್ಭಟಕ್ಕೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಹರಿವು ಶುರುವಾಗಿದೆ.

ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶರಣೆ ಗಂಗಾಂಬಿಕಾ ಐಕ್ಯ ಮಂಟಪ, ಅಶ್ವಥ್-ಲಕ್ಷ್ಮೀ ನರಸಿಂಹ ದೇವಸ್ಥಾನ ಮತ್ತು ವಿಠ್ಠಲ-ರುಕ್ಮಿಣಿ ಮಂದಿರದ ಸುತ್ತಲು ಮಲಪ್ರಭೆಯ ನೀರು ಆವರಿಸಿದೆ. ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ವ್ಯಾಪಿಸುವ ಸಾಧ್ಯತೆ ಹೆಚ್ಚಿದೆ.

ನದಿ ತೀರ ಹಾಗೂ ವಿವಿಧ ಸ್ಥಳಗಳಿಗೆ ಶುಕ್ರವಾರ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಸ್ಥಳೀಯ ಪ.ಪಂ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ ಭೇಟಿನೀಡಿ ಪರಿಶೀಲಿಸಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ನದಿ ತೀರದ ನಿವಾಸಿಗಳಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ವಿನಂತಿಸಿದ್ದಾರೆ. ಅಗತ್ಯಬಿದ್ದರೆ ಗಂಜಿಕೇಂದ್ರ ತೆರೆಯಲು ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ ಮಾಹಿತಿ ನೀಡಿದ್ದಾರೆ.

ADVERTISEMENT

ನದಿ ಸಮೀಪದ ಕೃಷಿ ಭೂಮಿಗಳಲ್ಲಿ ಪ್ರವಾಹ ಆವರಿಸಿಕೊಂಡಿದ್ದು, ಬೆಳೆ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ. ಮಲಪ್ರಭೆಯ ಪ್ರವಾಹದ ಅಬ್ಬರಕ್ಕೆ ರಾ.ಹೆ-4ರ ಪಕ್ಕದ ಸರ್ವೀಸ್‌ ರಸ್ತೆಯ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಎಂ.ಕೆ.ಹುಬ್ಬಳ್ಳಿ-ಅಮರಾಪುರ ಮತ್ತು ಎಂ.ಕೆ.ಹುಬ್ಬಳ್ಳಿ- ಖಾನಾಪುರ ರಸ್ತೆ ನಡುವಿನ ಸೇತುವೆ ಹಳ್ಳದ ಪ್ರವಾಹದಿಂದ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಸುತ್ತಲಿನ ಮತ್ತಿತರ ಗ್ರಾಮಗಳ ರಸ್ತೆಗಳಲ್ಲಿ ನೀರಿನ ಹರಿವಿನಿಂದ ಸಂಚಾರ ಸಮಸ್ಯೆ ಎದುರಾಯಿತು.

ವಿವಿಧೆಡೆ ಮರಗಳು ಧರೆಗುರುಳಿವೆ. ಪಟ್ಟಣದ ಗಾಂಧಿ ನಗರದ 1ನೇ ವಾರ್ಡ್‌ನಲ್ಲಿರುವ ಕೆಲ ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲಿನ ನಿವಾಸಿಗಳು ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಗಂಗಪ್ಪ ಪಕ್ಕೀರಪ್ಪ ಸಣ್ಣಕ್ಕಿ, ಮಹ್ಮದಗೌಸ ಆನೆವಾಲೆ, ಗಂಗಪ್ಪ ದೇಮಟ್ಟಿ ಮತ್ತು ಷಣ್ಮುಖ ಪಾಟೀಲ ಎಂಬುವವರ ಮನೆಗೋಡೆ ಕುಸಿದಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಕೊಂಡಿಕೊಪ್ಪ ಭೇಟಿನೀಡಿ ಪರಿಶೀಲಿಸಿದರು.

ಅಮರಾಪುರ, ವೀರಾಪುರ, ಹೊಳಿಹೊಸುರ, ಕುರುಗುಂದ, ನೇಗಿನಹಾಳ, ದಾಸ್ತಿಕೊಪ್ಪ, ಕಾದರವಳ್ಳಿ, ಹುಣಶೀಕಟ್ಟಿ, ತುರಮರಿ, ದೇವರಶೀಗಿಹಳ್ಳಿ, ಮಾರ್ಗನಕೊಪ್ಪ ಸೇರಿ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆ ಸುರಿದಿದ್ದು, ಅವಾಂತರ ಸೃಷ್ಟಿಸಿದೆ. ಎಲ್ಲೆಡೆ ಕೆರೆಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.