ADVERTISEMENT

ವಾರದೊಳಗೆ ಕಾಮಗಾರಿ ಆರಂಭ

ಶಾಸಕ ಅಭಯ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 15:40 IST
Last Updated 4 ಜನವರಿ 2023, 15:40 IST
ಬೆಳಗಾವಿಯ ಮಂಡೋಳಿ ರಸ್ತೆಯ ಗ್ಯಾಲಕ್ಸಿ ಹಾಲ್‌ನಲ್ಲಿ ಬುಧವಾರ ನಡೆದ ‘ಉಪಾಹಾರದೊಂದಿಗೆ ಚರ್ಚೆ (ನಾಷ್ಟೆ ಪೆ ಚರ್ಚಾ)’ ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ ಜನರ ಸಮಸ್ಯೆಗಳನ್ನು ಆಲಿಸಿದರು
ಬೆಳಗಾವಿಯ ಮಂಡೋಳಿ ರಸ್ತೆಯ ಗ್ಯಾಲಕ್ಸಿ ಹಾಲ್‌ನಲ್ಲಿ ಬುಧವಾರ ನಡೆದ ‘ಉಪಾಹಾರದೊಂದಿಗೆ ಚರ್ಚೆ (ನಾಷ್ಟೆ ಪೆ ಚರ್ಚಾ)’ ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ ಜನರ ಸಮಸ್ಯೆಗಳನ್ನು ಆಲಿಸಿದರು   

ಬೆಳಗಾವಿ: ‘ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಜನರು ಸಲ್ಲಿಸಿದ ಬೇಡಿಕೆಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ವಾರದೊಳಗೆ ಆರಂಭಿಸಲಾಗುವುದು’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿನ ಮಂಡೋಳಿ ರಸ್ತೆಯ ಗ್ಯಾಲಕ್ಸಿ ಹಾಲ್‌ನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 30, 44 ಮತ್ತು 55ನೇ ವಾರ್ಡ್‌ಗಳ ಜನರೊಂದಿಗೆ ಬುಧವಾರ ನಡೆಸಿದ ‘ಉಪಾಹಾರದೊಂದಿಗೆ ಚರ್ಚೆ (ನಾಷ್ಟೆ ಪೆ ಚರ್ಚಾ)’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಡುಗೆ ಅನಿಲ ಪೈಪ್‌ಲೈನ್‌, ಕುಡಿಯುವ ನೀರು ಸರಬರಾಜು, ಸ್ವಚ್ಛತೆಗೆ ಸಂಬಂಧಿಸಿ ಜನರು ಅಹವಾಲು ಸಲ್ಲಿಸಿದ್ದಾರೆ. ಈ ಪೈಕಿ ತುರ್ತು ಅಗತ್ಯವಿರುವ ಕೆಲಸಗಳಿಗೆ ವಾರದೊಳಗೆ ಚಾಲನೆ ನೀಡಲಾಗುವುದು. ಯೋಜನಾ ವರದಿ ಸಿದ್ಧಪಡಿಸಿ, ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಪಡೆಯಬೇಕಾದ ಕೆಲಸಗಳನ್ನು ಹಂತ–ಹಂತವಾಗಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಇಂಡಾಲ್ ನಂತರ ಯಾವುದೇ ಪ್ರಮುಖ ಕಂಪನಿಗಳು ಬೆಳಗಾವಿಗೆ ಬಂದಿಲ್ಲ. ಇದು ಶಾಂತಿ ಕದಡಿದ ಪ್ರದೇಶ ಎನ್ನುತ್ತಿರುವ ಕಂಪನಿಯವರು, ನೆರೆಯ ಪಟ್ಟಣಗಳತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಸಹಕರಿಸಬೇಕು. ಆಗ, ಬೇರೆ ಕಡೆಯಿಂದ ಹೂಡಿಕೆದಾರರು ಇಲ್ಲಿಗೆ ಬರುತ್ತಾರೆ. ಸ್ಥಳೀಯ ಯುವಕರಿಗೆ ಉದ್ಯೋಗವಕಾಶವೂ ಲಭಿಸುತ್ತವೆ’ ಎಂದು ಹೇಳಿದರು.

‘ಮೂರು ವಾರ್ಡ್‌ಗಳ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೆಲವರು ರಸ್ತೆಬದಿ ಬೇಕಾಬಿಟ್ಟಿಯಾಗಿ ಕಸ ಎಸೆಯುತ್ತಿದ್ದಾರೆ. ಇದರಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ಮಹಾನಗರ ಪಾಲಿಕೆಯವರು ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ಆನಂದ ಚವ್ಹಾಣ, ನಂದು ಮಿರಜಕರ್‌, ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.