ADVERTISEMENT

ಸಚಿವ ಸ್ಥಾನ ಸಿಗದಿದ್ದುದ್ದಕ್ಕೆ ಅಸಮಾಧಾನವಿಲ್ಲ: ಡಿ.ಎಂ. ಐಹೊಳೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 14:07 IST
Last Updated 7 ಆಗಸ್ಟ್ 2021, 14:07 IST
ನಾಗರಮುನ್ನೋಳಿ ಸಮೀಪದ ಬಂಬಲವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಶನಿವಾರ ಚಾಲನೆ ನೀಡಿದರು. ಮುಖಂಡರಾದ ಪವನ ಕತ್ತಿ, ಮಹೇಶ ಭಾತೆ, ಸುರೇಶ ಬೆಲ್ಲದ ಇದ್ದಾರೆ
ನಾಗರಮುನ್ನೋಳಿ ಸಮೀಪದ ಬಂಬಲವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಶನಿವಾರ ಚಾಲನೆ ನೀಡಿದರು. ಮುಖಂಡರಾದ ಪವನ ಕತ್ತಿ, ಮಹೇಶ ಭಾತೆ, ಸುರೇಶ ಬೆಲ್ಲದ ಇದ್ದಾರೆ   

ನಾಗರಮುನ್ನೋಳಿ (ಬೆಳಗಾವಿ ಜಿಲ್ಲೆ): ‘ಸಚಿವ ಸ್ಥಾನ ನೀಡುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದರು. ಆದರೆ, ಕೊನೆ ಹಂತದಲ್ಲಿ ತಪ್ಪಿ ಹೋಯಿತು. ಸಚಿವನಾಗುವುದು ನನ್ನ ನಸೀಬಿನಲ್ಲಿಲ್ಲ’ ಎಂದು ರಾಯಬಾಗ ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಸಮೀಪದ ಬಂಬಲವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 1 ಕೋಟಿ ಅನುದಾನದಲ್ಲಿ ಬಂಬಲವಾಡ– ನಾಗರಮುನ್ನೋಳಿ ಕೂಡುವ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನದ ಭರವಸೆ ಇತ್ತು. ಸಿಗದಿರುವುದಕ್ಕೆ ಯಾವುದೇ ನಾಯಕರ ಕುರಿತು ನನಗೆ ಅಸಮಾಧಾನವಿಲ್ಲ. ಮುಂದೆಯೂ ನಿರೀಕ್ಷೆ ಇಟ್ಟುಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುತ್ತೇನೆ’ ಎಂದರು.

ADVERTISEMENT

‘ಬಸದಿಗಳ ದುರಸ್ತಿಗೆ ₹ 2 ಕೋಟಿ ಮಂಜೂರಾಗಿದೆ. ತೋರಣಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು ಎನ್ನುವುದು ಆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸರ್ಕಾರ ನನ್ನ ಮನವಿಗೆ ಸ್ಪಂದಿಸಿ ಮಂಜೂರಾತಿ ನೀಡಿದೆ. ಇದರಿಂದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಅತಿವೃಷ್ಟಿಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷವಾಗಿ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕು’ ಎಂದು ಸೂಚಿಸಿದರು.

ಮುಖಂಡ ಪವನ ಕತ್ತಿ ಮಾತನಾಡಿ, ‘ರಾಯಬಾಗ ಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲ್ಲೂಕಿನ ಹಳ್ಳಿಗಳು ಅಭಿವೃದ್ಧಿ ಕಾಣಲು ಶಾಸಕ ಐಹೊಳೆ ಕೊಡುಗೆ ಅಪಾರವಾಗಿದೆ. ಎಲ್ಲ ಇಲಾಖೆಗಳಿಂದ ಅನುದಾನ ತರುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡರಾದ ಮಹೇಶ ಭಾತೆ, ಸುರೇಶ ಬೆಲ್ಲದ, ಬಸವರಾಜ ಕುಂಬಾರ, ಹಸನ ಸನದಿ, ದೇವರಾಜ ಪಶ್ಚಾಪುರೆ, ಬಸು ಮಾಳಗಿ, ರವಿ ಹಿರೆಕೋಡಿ, ಚಂದ್ರಶೇಖರ ಅರಭಾಂವಿ, ಸದಾಶಿವ ಘೋರ್ಪಡೆ, ಬಸಲಿಂಗ ಕಾಡೇಶಗೋಳ, ಮಹಾತೇಶ ಯಶವಂತಗೋಳ, ಐ.ಎ. ಕಾಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.