ADVERTISEMENT

ಅಮೃತ್ 2.0 ಯೋಜನೆಗೆ ಶಾಸಕ ಐಹೊಳೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:40 IST
Last Updated 11 ಸೆಪ್ಟೆಂಬರ್ 2024, 14:40 IST
ರಾಯಬಾಗ ಪಟ್ಟಣದಲ್ಲಿ ಅಮೃತ್ 2.0ಯೋಜನೆಗೆ ಶಾಸಕ ಡಿ.ಎಂ.ಐಹೊಳೆ ಬುಧವಾರ ಭೂಮಿಪೂಜೆ ನೆರವೇರಿಸಿದರು
ರಾಯಬಾಗ ಪಟ್ಟಣದಲ್ಲಿ ಅಮೃತ್ 2.0ಯೋಜನೆಗೆ ಶಾಸಕ ಡಿ.ಎಂ.ಐಹೊಳೆ ಬುಧವಾರ ಭೂಮಿಪೂಜೆ ನೆರವೇರಿಸಿದರು   

ರಾಯಬಾಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಅಮೃತ್ 2.0 ಯೋಜನೆಯಡಿ ರಾಯಬಾಗ ಪಟ್ಟಣಕ್ಕೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಪಟ್ಟಣಕ್ಕೆ ₹22.83ಕೋಟಿ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದ್ದು, ಕೇಂದ್ರ ಸರ್ಕಾರದ ಶೇ 50 ರಷ್ಟು ಅನುದಾನ ರಾಜ್ಯ ಸರ್ಕಾರದ ಶೇ 40 ಅನುದಾನ ಹಾಗೂ ಸ್ಥಳೀಯ ಸಂಸ್ಥೆಯಿಂದ ಶೇ 10ರಷ್ಟು ಅನುದಾನವನ್ನು ಅಮೃತ್ ಯೋಜನೆಗೆ ವಿನಿಯೋಗಿಸಲಾಗುತ್ತಿದೆ. ಈ ಬೃಹತ್ ಯೋಜನೆಯಿಂದ ಇನ್ನು ಮುಂದೆ ಪಟ್ಟಣದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಹಾಯವಾಗಲಿದೆ ಎಂದರು.

ದಿಗ್ಗೇವಾಡಿ ಗ್ರಾಮದ ಬಳಿ ಇರುವ ಕೃಷ್ಣಾ ನದಿ ಬಲದಂಡೆಯಲ್ಲಿ ಮೂಲ ಸ್ಥಾವರಗಳನ್ನು ಮತ್ತು ಪಟ್ಟಣದ ಭೀಮ ನಗರ ಖಾಲಿ ಇರುವ ಸ್ಥಳದಲ್ಲಿ ನೀರು ಶುದ್ಧೀಕರಣದ ಘಟಕ ನಿರ್ಮಾಣವಾಗಲಿದೆ. ಇದರಿಂದ 6.20 ದಶಲಕ್ಷ ಲೀಟರ್‌ ನೀರು ದೊರೆಯಲಿದೆ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಘಟಪ್ರಭಾ ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ನೀರು ಹರಿಸಿ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದ ಮಾಜಿ ಸಚಿವ ದಿ.ವಿ.ಎಲ್.ಪಾಟೀಲರ ಕಾರ್ಯಗಳನ್ನು ಸ್ಮರಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಜೀವ ಮಾಂಗ, ಅಧ್ಯಕ್ಷ ಅಶೋಕ ಅಂಗಡಿ, ದತ್ತಾ ಜಾಧವ, ಸದಾಶಿವ ಘೋರ್ಪಡೆ, ಸದಾಶಿವ ಹಳಿಂಗಳಿ, ಬಸವರಾಜ ದೋಣವಾಡೆ, ಗಣೇಶ ಕಾಂಬಳೆ, ಸುರೇಶ ಮಾಳಿ, ಅಪ್ಪಾಜಿ ಪೂಜಾರಿ, ಹಣಮಂತ ಸಾನೆ, ಅಪ್ಪುಗಡ್ಡೆ, ತಯ್ಯಬ ಮುಲ್ಲಾ, ಮಹೇಶ ಕರಮಡಿ, ಜಿಯಾಉಲ್ಲಾ ಮುಲ್ಲಾ ಸೇರಿದಂತೆ ಪಟ್ಟಣ ಪಂಚಾಯಿತಿಯ ಇತರ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.