ADVERTISEMENT

ಶಾಸಕ ವಿಶ್ವಾಸ ವೈದ್ಯ ಜನ್ಮದಿನ: ಸವದತ್ತಿಯಲ್ಲಿ ಅದ್ಧೂರಿ ತಯಾರಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:57 IST
Last Updated 10 ಅಕ್ಟೋಬರ್ 2025, 2:57 IST
ಸವದತ್ತಿಯ ಎಪಿಎಂಸಿ ವೃತ್ತದಲ್ಲಿ ತಲೆ ಎತ್ತಿದ ಶಾಸಕ ವಿಶ್ವಾಸ ವೈದ್ಯ ಅವರ ಕಟೌಟ್
ಸವದತ್ತಿಯ ಎಪಿಎಂಸಿ ವೃತ್ತದಲ್ಲಿ ತಲೆ ಎತ್ತಿದ ಶಾಸಕ ವಿಶ್ವಾಸ ವೈದ್ಯ ಅವರ ಕಟೌಟ್   

ಸವದತ್ತಿ: ಚಲನಚಿತ್ರ ನಟರ ಸಿನಿಮಾ ಬಿಡುಗಡೆ ಹಾಗೂ ಜನ್ಮದಿನದಂದು ಅವರ ಅಭಿಮಾನಿಗಳು ಬೃಹತ್‌ ಕಟೌಟುಗಳನ್ನು ನಿರ್ಮಿಸಿ ಸಂಭ್ರಮಿಸುವುದು ಸಾಮಾನ್ಯ. ಈಗ ಶಾಸಕ ವಿಶ್ವಾಸ ವೈದ್ಯ ಅವರ ಅಂಥದ್ದೇ ಕಟೌಟುಗಳು ಈಗ ಸವದತ್ತಿ ಪಟ್ಟಣ ಹಾಗೂ ಕ್ಷೇತ್ರದಲ್ಲಿ ರಾರಾಜಿಸುತ್ತಿವೆ.

ಅಕ್ಟೋಬರ್‌ 12ರಂದು ಶಾಸಕ ವಿಶ್ವಾಸ ವೈದ್ಯ ಅವರ ಜನ್ಮದಿನವಿದ್ದು, ಅವರ ಅಭಿಮಾನಿಗಳು ಈ ಬಾರಿ ಅದ್ಧೂರಿ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿವರ್ಷ ಬ್ಯಾನರ್, ಫ್ಲೆಕ್ಸ್‌ಗಳಿಗೆ ಸೀಮಿತವಾಗುತ್ತಿತ್ತು. ಈ ಬಾರಿ ಯುವ ಅಭಿಮಾನಿಗಳಿಂದ ವಿನೂತನ ರೀತಿಯಲ್ಲಿ ವಿಜ್ರಂಭಣೆ ಆಚರಣೆಗೆ ಸಿದ್ಧತೆ ನಡೆಸಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಪ್ರಮುಖ ಸ್ಥಳಗಳಲ್ಲಿ ಬಹತ್‌ ಕಟೌಟುಗಳನ್ನು ನಿರ್ಮಿಸಿ, ನೆಚ್ಚಿನ ಶಾಸಕರ ಜನ್ಮದಿನಾಚರಣೆಗೆ ಮುಂದಾಗಿದ್ದಾರೆ.

ದಾವಣಗೆರೆಯಲ್ಲಿ ನಡೆದ ‘ಸಿದ್ಧರಾಮೋತ್ಸವ’ದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಟೌಟು ಹಾಕಲಾಗಿತ್ತು. ಅದೇ ಮಾದರಿಯ ರೂಪಗಳನ್ನು ಈಗ ಶಾಸಕ ವಿಶ್ವಾಸ ವೈದ್ಯ ಅವರಿಗೂ ನೀಡಲಾಗಿದೆ.

ADVERTISEMENT

ಪಟ್ಟಣ ಎಪಿಎಂಸಿ ವೃತ್ತ, ಕಟಕೋಳ ಬ್ಯಾಂಕ್‌ ವೃತ್ತ, ಬಸ್‌ ನಿಲ್ದಾಣ ಹಾಗೂ ಸಿದ್ದನಕೊಳ್ಳದ ಸ್ಥಳಗಳಲ್ಲಿ ಶಾಸಕರ ಕಟೌಟುಗಳು ರಾರಾಜಿಸುತ್ತಿವೆ. ಯರಗಟ್ಟಿ ಪಟ್ಟಣದಲ್ಲಿಯೂ ಎರಡು ಕಟೌಟ್‌ಗಳು ತಲೆ ಎತ್ತಿವೆ. ಸುಮಾರು 45 ಅಡಿ ಎತ್ತರ, 14 ಅಡಿ ಅಗಲವಿರುವ ಈ ಕಟೌಟ್‌ಗಳು ತಲಾ ಒಂದಕ್ಕೆ ₹1 ಲಕ್ಷಕ್ಕೂ ಅಧಿಕ ವೆಚ್ಚ ತಗುಲಿದೆ ಎನ್ನುತ್ತಾರೆ ಅಭಿಮಾನಿಗಳು.

ಶಾಸಕರ ಜನ್ಮದಿನದ ಪ್ರಯುಕ್ತ ಸ್ವಯಂ ‍ಪ್ರೇರಿತ ರಕ್ತದಾನ ಶಿಬಿರ, ಹೃದಯ ತಪಾಸಣೆ, ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಬಸವರಾಜ ಅರಮನಿ ಹಾಗೂ ವಾಲ್ಮೀಕಿ ಮುಖಂಡ ಜಗದೀಶ ಶಿರಸಂಗಿ ತಿಳಿಸಿದ್ದಾರೆ.

–––

ಪಟ್ಟಣದಲ್ಲಿ ಮೊದಲ ಬಾರಿಗೆ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿನೂತನ ಕಟೌಟುಗಳನ್ನು ಹಾಕಿದ್ದು ಖುಷಿ ತಂದಿದೆ. ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲಾಗದು

–ಮಂಜುನಾಥ ಪಾಚಂಗಿ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.