ADVERTISEMENT

ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್‌ 13ಕ್ಕೆ ಚುನಾವಣೆ: ಘಟಾನುಘಟಿಗಳ ಸ್ಪರ್ಧೆ

ಎಂ.ಮಹೇಶ
Published 12 ಮೇ 2022, 19:30 IST
Last Updated 12 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ (ಜೂನ್‌ 13) ಚುನಾವಣಾ ಕಣ ಘಟಾನುಘಟಿಗಳ ಸ್ಪರ್ಧೆಯಿಂದಾಗಿ ರಂಗೇರಿದೆ. ಪ್ರತಿಷ್ಠೆ–ಪೈಪೋಟಿಗೆ ವೇದಿಕೆಯೂ ಆಗಿದೆ.

ಅರುಣ ಶಹಾಪುರ

ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಅರುಣ ಶಹಾಪುರ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿದೆ. ಪ್ರತಿ ಸ್ಪರ್ಧಿಯಾಗಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಕಣದಲ್ಲಿದ್ದಾರೆ.

ಪದವೀಧರರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಹಣಮಂತ ನಿರಾಣಿ ಅವರಿಗೆ ಬಿಜೆಪಿ ಇನ್ನೊಂದು ಅವಕಾಶ ನೀಡಿದೆ. ಈ ಕ್ಷೇತ್ರದಲ್ಲಿ ಸುನೀಲ ಸಂಕ ಅಭ್ಯರ್ಥಿಯಾಗಿದ್ದಾರೆ.

ADVERTISEMENT

ಬಿಜೆಪಿಯು ಮಾರ್ಚ್‌ 11ರಂದೇ ಟಿಕೆಟ್‌ ಅಂತಿಮಗೊಳಿಸಿ ಘೋಷಿಸಿತ್ತು. ಕಾಂಗ್ರೆಸ್‌ನಿಂದ ಹಲವು ದಿನಗಳ ನಂತರ ಟಿಕೆಟ್‌ ಪ್ರಕಟಿಸಲಾಗಿದೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದರು. ಈಗ, ವೇಳಾಪಟ್ಟಿ ಪ್ರಕಟವಾಗಿದ್ದು ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ.

ಬಿಜೆಪಿಯಿಂದ ಬೆಳಗಾವಿಗರಿಗೆ ಟಿಕೆಟ್ ಇಲ್ಲ:ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಕ್ರಮವಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯವರು. ಹೋದ ಚುನಾವಣೆಯಲ್ಲಿ ಈ ಕ್ಷೇತ್ರಗಳಿಗೆ ಬಿಜೆಪಿಯಿಂದ ಅವರಿಗೆ ಟಿಕೆಟ್ ಕೊಡಲಾಗಿತ್ತು. ಈ ಬಾರಿಯಾದರೂ ಶಿಕ್ಷಕರ ಕ್ಷೇತ್ರಕ್ಕಾದರೂ ಬೆಳಗಾವಿಯವರಿಗೆ ಮಣೆ ಹಾಕಬೇಕು ಎಂಬ ಒತ್ತಾಯ ಆ ಪಕ್ಷದವರಿಂದ ಕೇಳಿಬಂದಿತ್ತು. ಹಲವು ಮುಖಂಡರು ಆಗ್ರಹವನ್ನೂ ಮಂಡಿಸಿದ್ದರು. ಹೆಚ್ಚಿನ ಮತದಾರರು ಬೆಳಗಾವಿ ಜಿಲ್ಲೆಯವರು ಎನ್ನುವುದು ಅವರ ವಾದಕ್ಕೆ ಕಾರಣವಾಗಿತ್ತು. ಆದರೆ, ಅದಕ್ಕೆ ಬಿಜೆಪಿ ಮನ್ನಣೆ ನೀಡಿಲ್ಲ. ತೀವ್ರ ಪೈಪೋಟಿಯ ನಡುವೆಯೂ, ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಹಾಲಿ ಸದಸ್ಯರು ಯಶಸ್ವಿಯಾಗಿದ್ದಾರೆ.

ವಿಶೇಷವೆಂದರೆ, ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರೂ ಬೆಳಗಾವಿ ಜಿಲ್ಲೆಯವರಾಗಿದ್ದಾರೆ.

ಹಣಮಂತ ನಿರಾಣಿ

ಪುನರ್ಜನ್ಮಕ್ಕಾಗಿ ಹುಕ್ಕೇರಿ ಶ್ರಮ:ಚಿಕ್ಕೋಡಿ–ಸದಲಗಾ ಮಾಜಿ ಶಾಸಕ, ಮಾಜಿ ಸಚಿವ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಪ್ರಕಾಶ ಹುಕ್ಕೇರಿ ರಾಜಕೀಯವಾಗಿ ಪುನರ್ಜನ್ಮಕ್ಕೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಸುನೀಲ ಸಂಕ ಅಥಣಿಯವರು. ವಕೀಲರಾಗಿರುವ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಣಮಂತ ನಿರಾಣಿ ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಸಹೋದರ. ಇವರೆಲ್ಲರೂ ಕ್ಷೇತ್ರದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ‘ತಪ್ಪದೆ ಹಾಜರಿ’ ಹಾಕುತ್ತಿದ್ದಾರೆ; ಶಿಕ್ಷಕರು–ಪದವೀಧರರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ.

ಪ್ರಮುಖ ಪಕ್ಷಗಳ ನಾಲ್ವರು ಅಭ್ಯರ್ಥಿಗಳೂ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಬಂಡಾಯ ಭೀತಿ, ಬೇಡಿಕೆ

ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಗೂ ಬಂಡಾಯ ಭೀತಿ ಎದುರಾಗಿದೆ. ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಇದಕ್ಕೆ ಕಾರಣವಾಗಿದೆ.

ಪ್ರಕಾಶ ಹುಕ್ಕೇರಿ

ಹೋದ ಚುನಾವಣೆಯಲ್ಲಿ ಶಿಕ್ಷಕರ ಮತ ಕ್ಷೇತ್ರದಿಂದ ಕಡಿಮೆ ಅಂತರದಲ್ಲಿ ಸೋತಿದ್ದ ಎನ್‌.ಬಿ. ಬನ್ನೂರ ಮತ್ತೊಮ್ಮೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವಕಾಶ ಸಿಗದಿದ್ದರಿಂದ ‍ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಪದವೀಧರರ ಕ್ಷೇತ್ರದಿಂದ ಕಿರಣ ಸಾಧುನವರ ‘ಕೈ’ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರ ಸಂಘಟನೆಯ ಪ್ರಮುಖರಾಗಿರುವ ರಾಮು ಗುಗ್ಗವಾಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆದ್ದಿದ್ದ ಕಾಂಗ್ರೆಸ್ (ಚನ್ನರಾಜ ಹಟ್ಟಿಹೊಳಿ ಆಯ್ಕೆ) ಉತ್ಸಾಹದಲ್ಲಿದೆ. ಆ ಚುನಾವಣೆಯಲ್ಲಿ ಹಾಲಿ ಸದಸ್ಯರಾಗಿದ್ದ ಮಹಾಂತೇಶ ಕವಟಗಿಮಠ ಸೋಲಿನಿಂದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಆ ಚುನಾವಣೆಯ ಮಾದರಿಯನ್ನೆ ಅನುಸರಿಸಲು ಕಾಂಗ್ರೆಸ್ ಮುಂದಾಗಿದೆ; ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಇದರಿಂದ ಮತದಾರರಿಗೆ ‘ಭಾರಿ ಬೇಡಿಕೆ’ ಕಂಡುಬಂದಿದೆ.

ಸುನೀಲ ಸಂಕ

ಮತದಾರರ ವಿವರ

ವಾಯವ್ಯ ಶಿಕ್ಷಕರ ಕ್ಷೇತ್ರ

ಜಿಲ್ಲೆ;ಸಂಖ್ಯೆ

ಬೆಳಗಾವಿ;6,355

ಬಾಗಲಕೋಟೆ;4,738

ವಿಜಯಪುರ;5,512

ಒಟ್ಟು;16,505

ವಾಯವ್ಯ ಪದವೀಧರರ ಕ್ಷೇತ್ರ

ಬೆಳಗಾವಿ;31,489

ಬಾಗಲಕೋಟೆ; 27,342

ವಿಜಯಪುರ;14,847

ಒಟ್ಟು;73,648

ಮತಗಟ್ಟೆಗಳ ಸಂಖ್ಯೆ: 151

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.