ADVERTISEMENT

ಮಾದರಿ ಸೌರ ಗ್ರಾಮ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ 24 ಹಳ್ಳಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 2:34 IST
Last Updated 18 ನವೆಂಬರ್ 2025, 2:34 IST
   

ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ 24 ಗ್ರಾಮಗಳನ್ನು ಕೇಂದ್ರ ಸರ್ಕಾರದ ʻಮಾದರಿ ಸೌರ ಗ್ರಾಮʼ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಆಯ್ಕೆ ಮಾಡಲಾಗಿದ್ದು, ಅಂತಿಮವಾಗಿ ಆಯ್ಕೆಯಾದ ಗ್ರಾಮಕ್ಕೆ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ₹1 ಕೋಟಿ ಪ್ರೋತ್ಸಾಹಧನ ಲಭಿಸಲಿದೆ.

ಹಾವೇರಿ ಜಿಲ್ಲೆಯ ಆಡೂರು, ಅಕ್ಕಿಆಲೂರು, ಮಾಸಣಗಿ, ವಿಜಯಪುರ ಜಿಲ್ಲೆಯ ತೆಲಗಿ, ಮೋರಟಗಿ, ಹೊನ್ನುಟಗಿ, ಕಾಖಂಡಕಿ, ಬಾಗಲಕೋಟೆ ಜಿಲ್ಲೆಯ ತೊಗಲಬಾಗಿ, ನಂದಿಕೇಶ್ವರ, ಧಾರವಾಡ ಜಿಲ್ಲೆಯ ಹೆಬಸೂರು, ಯಲಿವಾಳ, ಹೆಬ್ಬಳ್ಳಿ, ಮಿಶ್ರಿಕೋಟಿ, ಉತ್ತರ ಕನ್ನಡದ ಬನವಾಸಿ, ರಾಮನಗರ, ಮಜಲಿ, ಹೆಬ್ಳೆ, ಬೆಳಗಾವಿ ಜಿಲ್ಲೆಯ ಮುದಕವಿ, ಅಂಬಡಗಟ್ಟಿ, ಅಳಗವಾಡಿ, ಉಚಗಾಂವ್‌ ಹಾಗೂ ಗದಗ ಜಿಲ್ಲೆಯ ಸೊರಗಟಿ, ಬಿಂಕದಕಟ್ಟೆ ಮತ್ತು ಗೊಗೇರಿ ಆಯ್ಕೆಯಾದ ಗ್ರಾಮಗಳು.

‘ಈ ಗ್ರಾಮಗಳಲ್ಲಿ ಆಯಾ ಪಂಚಾಯಿತಿಗಳ ನೇತೃತ್ವದಲ್ಲಿ ವಸತಿ ಗ್ರಾಹಕರಿಗೆ ‘ಪಿಎಂ ಸೂರ್ಯಘರ್‌’ ಯೋಜನೆಯಡಿ ಮೇಲ್ಚಾವಣಿ ಸೌರಶಕ್ತಿ ಅಳವಡಿಸುವುದು ಹಾಗೂ ಇತರೆ ಗ್ರಾಹಕರಿಗೆ ಸಬ್ಸಿಡಿ ರಹಿತ ಯೋಜನೆಯಡಿ ಮೇಲ್ಚಾವಣಿ ಸೌರಶಕ್ತಿ ಅಳವಡಿಸಲು ಪ್ರೋತ್ಸಾಹ ನೀಡಲಾಗುತ್ತದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ‘ಪಿಎಂ ಕುಸುಮ್‌– ಬಿ’ ಯೋಜನೆಯಡಿ ಸೌರ ಪಂಪ್‌ಸೆಟ್ ಅಳವಡಿಕೆಗೆ ಒತ್ತು ನೀಡಲಾಗುವುದು. ಸರ್ಕಾರಿ ಕಟ್ಟಡಗಳ ಮೇಲೆ ಸೌರ ಮೇಲ್ಚಾವಣಿ ಅಳವಡಿಸಲು, ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸಲು ಪ್ರೋತ್ಸಾಹಿಸಲಾಗುವುದು’ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಸರ್ಧೆಯ ಅವಧಿ ಆರು ತಿಂಗಳು ಇರಲಿದ್ದು, ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ ನವೀಕರಿಸಬಹುದಾದ ಇಂಧನ ಬಳಸಿದ ಗ್ರಾಮವನ್ನು ಮಾದರಿ ಸೌರ ಗ್ರಾಮ ಎಂದು ಘೋಷಿಸಲಾಗುವುದು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.