ಮೂಡಲಗಿ: ಇಲ್ಲಿನ ಲಕ್ಷ್ಮೀನಗರದ ಹೃದಯ ಭಾಗದಲ್ಲಿ ನಿರ್ಮಿಸಿದ ಸಾಯಿ ಮಂದಿರದ ಲೋಕಾರ್ಪಣೆ ಹಾಗೂ ಸಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾನೆ ಆ.11ರಿಂದ 14ರ ವರೆಗೆ ಜರುಗಲಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.
ಭಕ್ತರ ದೇಣಿಗೆಯಲ್ಲಿ ಅಂದಾಜು ₹1.50 ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣಗೊಂಡಿದೆ. ಶಿರಡಿಯ ಸಾಯಿಬಾಬಾ ಮತ್ತು ಪುಟ್ಟಪರ್ತಿ ಸತ್ಯ ಸಾಯಿಬಾಬಾರ ಉಭಯ ಮೂರ್ತಿಗಳು ಒಂದೇ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಇಲ್ಲಿಯ ವಿಶೇಷವಾಗಿದೆ. ಹೇಮದ್ಪಂಥಿ ವಾಸ್ತುಶಿಲ್ಪ ಶೈಲಿಯ ಗೋಪುರ ಹೊಂದಿರುವ ಮಂದಿರುವ ಬಹು ಆಕರ್ಷಕವಾಗಿದೆ.
ಹಿನ್ನೆಲೆ: ಬೆರಳಣಿಕೆಯಷ್ಟು ಭಕ್ತರು ಕೂಡಿ 2005ರಲ್ಲಿ ಸ್ಥಳೀಯ ಎಸ್‌ಎಸ್‌ಆರ್ ಕಾಲೇಜಿನ ಗಣಪತಿ ಮಂದಿರದಲ್ಲಿ ಶಿಕ್ಷಕ ಬಸವರಾಜ ಬಾಗಲಕೋಟ ನೇತೃತ್ವದಲ್ಲಿ ನಿತ್ಯ ಭಜನೆ, ಪ್ರಾರ್ಥನೆ ಶುರು ಮಾಡಿದರು. ಇದೇ ಮುಂದೆ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸ್ವರೂಪ ಪಡೆದು 18 ವಸಂತಗಳನ್ನು ಕಂಡಿದೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತ ಸದ್ಯ ಸಮಿತಿಗೆ ಸದಸ್ಯರ ಸಂಖ್ಯೆ ಇನ್ನೂರು ಗಡಿಯನ್ನು ದಾಟಿದೆ. ಸಾಯಿ ಸೇವೆಯಲ್ಲಿ ಹಲವು ಭಕ್ತಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಸುಪ್ರಭಾತ, ವೇದಘೋಷ, ಪ್ರತಿ ಸೋಮವಾರ ನಗರ ಸಂಕೀರ್ತನ ಇರುವುದು. ಮನೆ, ಮನೆಗೆ ಸಾಯಿ ಭಜನೆ ಮಾಡುತ್ತಿದ್ದು ಈಗಾಗಲೇ 600ಕ್ಕೂ ಅಧಿಕ ಮನೆಗಳಲ್ಲಿ ಸಾಯಿ ಭಜನೆ ನಡೆದಿವೆ. ಬಾಲ ವಿಕಾಸ ಕೇಂದ್ರದ ಮೂಲಕ ಮಕ್ಕಳಿಗೆ ಸಂಸ್ಕಾರ ಪಾಠ, ಬಡ, ನಿರ್ಗತಿಕರಿಗೆ ಊಟ ಬಡಿಸುವ ‘ನಾರಾಯಣ ಸೇವೆ’, ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ‘ಪ್ರೇಮತರು’ ಮೂಲಕ ಹಸಿರು ಬೆಳೆಸುವರು. ಪ್ರತಿ ವರ್ಷ ಪುಟ್ಟಪರ್ತಿ ಆಸ್ಪತ್ರೆ, ದಾಸೋಹ ಛತ್ರಕ್ಕೆ ಸಮಿತಿಯ 15 ಜನ ಸದಸ್ಯರು ಸೇವೆ ಸಲ್ಲಿಸಿರುವರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಪುರಸಭೆಯಿಂದ ನಿವೇಶನ ಕೊಡಿಸಿದರಲ್ಲದೆ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ಸಹ ನೀಡಿದರು. 2020ರ ನವೆಂಬರ್‌ದಲ್ಲಿ ಮಂದಿರಕ್ಕೆ ಅಡಿಪಾಯ ಹಾಕುತ್ತಿದ್ದಂತೆ ಭಕ್ತರು ನಾ ಮುಂದು, ತಾ ಮುಂದು ಎಂದು ದೇಣಿಗೆ ನೀಡಿದ್ದರ ಫಲವಾಗಿ ಗೊತ್ತಿಲ್ಲದ್ದಂತೆ ಮಂದಿರವು ಸಿದ್ಧಗೊಂಡಿದೆ.
ಲೋಕಾರ್ಪಣೆ: ನಾಳೆಯಿಂದ ಕಾರ್ಯಕ್ರಮ
ಆ. 11ರ ಬೆಳಿಗ್ಗೆ 9ರಿಂದ ಶಿವಬೋಧರಂಗ ಮಠದಿಂದ ವಿವಿಧ ವಾದ್ಯಗಳ ಮತ್ತು 108 ಕುಂಭ ಮೇಳದೊಂದಿಗೆ ಉಭಯ ಸಾಯಿ ಮೂರ್ತಿಗಳ ಮತ್ತು ಕಳಸದ ಮೆರವಣಿಗೆ.
ಆ.12ರಂದು ಬೆಳಿಗ್ಗೆ 9ಕ್ಕೆ ಮೂರ್ತಿ ಪೀಠಾರೋಹಣ.
ಆ. 13ರಂದು ಸಂಜೆ 5ಕ್ಕೆ ರಾಕ್ಷೋಘ್ನ ಹೋಮ.
ಆ. 14ರ ಬೆಳಿಗ್ಗೆ 7ಕ್ಕೆ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ. ಸಂಜೆ 4ಕ್ಕೆ ಮಂದಿರದ ಉದ್ಘಾಟನೆ ಮತ್ತು ಮಂದಿರ ಪಕ್ಕದಲ್ಲಿ ಹಾಕಿರುವ ಮಂಟಪದಲ್ಲಿ ಧರ್ಮ ಸಭೆ ಜರುಗುವುದು. ನಾಲ್ಕು ದಿನ ಭಕ್ತಾದಿಗಳಿಗೆ ಮಹಾಪ್ರಸಾದ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.