ಮೊಹರಂ ಹಬ್ಬ (ಸಾಂಕೇತಿಕ ಚಿತ್ರ )
ರಾಯಬಾಗ: ಜಾತಿಯ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯದ ಕೊಂಡಿಯಾಗಿರುವ ಮೊಹರಂ ಹಬ್ಬ ಆಚರಣೆ ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡು ಬಂದಿದೆ. ಮೊರಬದಲ್ಲಿ ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ.
ಇದಕ್ಕೆ ಅಲಾಯಿ ಹಬ್ಬ ಅಂತಲೂ ಹೆಸರು. ಮೊರಬ ಗ್ರಾಮದಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಮಜವಾಗಿರುತ್ತದೆ. ಐದು ದಿನಗಳ ಕಾಲ ಕೂರಿಸಲಾಗುವ ಅಲಾಯಿ (ಪಂಜಾ) ದೇವರಿಗೆ ಕುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಇನ್ನೊಂದೆಡೆ ಮೊಹರಂ ದಿನ ಮಾದಿಲಿ, ಸಕ್ಕರೆ, ಕಾರಿಕು, ಕೊಬ್ಬರಿ ಹಾಗೂ ಮಾಂಸವನ್ನು ನೈವೇದ್ಯವನ್ನಾಗಿ ಭಕ್ತರು ಅರ್ಪಿಸುತ್ತಾರೆ.
ಮೊರಬ ಗ್ರಾಮದ ಮೊಹರಂ ನೋಡಲು ಹತ್ತಿರದ ಹಳ್ಳಿಗಳಿಂದ ನಮ್ಮ ರಾಜ್ಯದಿಂದ ಹಾಗೂ ನೆರೆ ರಾಜ್ಯದ ಕೊಲ್ಹಾಪುರ, ಸಾಂಗ್ಲಿ, ಮುಂಬಯಿ ಪಟ್ಟಣಗಳಿಂದ ಬಂದ ಜನ ದೇವರ ಆಶೀರ್ವಾದ ಪಡೆದು ಕಾಣಿಕೆ ಸಲ್ಲಿಸುತ್ತಾರೆ.
ಬಾವಾ, ಫಕೀರರಾಗಿ ಸೇವೆ:
ಮೊರಬ ಗ್ರಾಮದ ಸಾವಿರಾರು ಮಕ್ಕಳು, ಯುವಕರು, ಪುರುಷರು ಸೇರಿ ಐದು ದಿನಗಳ ಕಾಲ ಲಾಲಸಾಬ್ ದೇವರ ಮುಂದೆ ಗೆಜ್ಜೆ ಕಟ್ಟಿಕೊಂಡು ನಾದಕ್ಕನುಸಾರವಾಗಿ ಹೆಜ್ಜೆ ಹಾಕುತ್ತಾರೆ. ಅಲ್ಲದೇ ಹೊಂಡದ ಕೆಸರಿನಲ್ಲಿ ಮಿಂದೆದ್ದು ಸಂತಸ ಹಂಚಿಕೊಳ್ಳುತ್ತಾರೆ. ಇವರು ದೇವರಿಗೆ ಹರಕೆ ತೀರಿಸಲೆಂದು ಬಾವಾ, ಫಕೀರರಾಗಿ ಕೈಯಲ್ಲಿ, ಕೊರಳಲ್ಲಿ ವಿವಿಧ ಬಗೆಯ ಬಣ್ಣದ ಲಾಡಿಗಳನ್ನು ಕಟ್ಟಿಕೊಳ್ಳುತ್ತಾರೆ.
ಎಲ್ಲ ಸಮುದಾಯದ ಮನೆತನಗಳಿಗೆ ಕಾಯಕ ಹಂಚಿಕೆ:
ಮೊರಬದ ಮೊಹರಂ ವೈಶಿಷ್ಟ್ಯವೆಂದರೆ ಇದು ಹಿಂದೂಗಳ ನೇತೃತ್ವದಲ್ಲಿ ನಡೆಯುತ್ತದೆ. ಅಷ್ಟೇ ಅಲ್ಲದೇ ದೇವರನ್ನು ಆಡಿಸುವವರು ಹಿಂದುವೇ ಅಗಿರುವುದು ಇಲ್ಲಿನ ಸೌಹಾರ್ದದ ಸಂಕೇತವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಹಬ್ಬದಲ್ಲಿ ಎಂದೂ ಶಾಂತಿ ಕದಡಿಲ್ಲ. ದೇವರ ಕಾಯಕದಲ್ಲಿ ಮೊರಬದಲ್ಲಿನ ಎಲ್ಲ ಜಾತಿಗಳ ಮನೆತನಗಳಿಗೂ ಒಂದೊಂದು ಅಧಿಕೃತ ಸ್ಥಾನವಿದ್ದು ಹಲಗೆ ಬಾರಿಸುವ, ಕಹಳೆ ಊದುವ, ನೈವೇದ್ಯ ಸಲ್ಲಿಸುವ, ಉಸಿರು ನೀಡುವ, ದಾರಿ ತೊರಿಸುವ, ಕೊಂಡ ಅಗೆಯುವ, ಕೊಂಡದ ಮೇಲೆ ಗಿಡ ನೆಡುವ, ನೀರು ಕೊಡುವ ಹೀಗೆ ಮುಂತಾದ ಕಾಯಕಗಳನ್ನು ಅಯಾ ಮನೆತನಗಳಿಗೆ ಹಂಚಲಾಗಿರುತ್ತದೆ.
ಹಬ್ಬದ ಕೊನೆಯ ಲಾಲಸಾಬ್( ಇಮಾಮ್ ಹುಸೇನ್) ಅವರನ್ನು ಸ್ಮರಿಸುವುದಕ್ಕಾಗಿ ಊರು-ಕೇರಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಇಮಾಮ್ ಅವರು ತೋರಿದ ಮಾನವೀಯತೆಗೆ ಗೌರವ ಕೊಡುವುದೇ ಮೊಹರಂ ಹಬ್ಬದ ವಿಶೇಷತೆ. ಅವರು ಇಸ್ಲಾಂ ಧರ್ಮದ ಕಟ್ಟುಪಾಡುಗಳಿಗಾಗಿ ಜೀವನ ಮುಡುಪಾಗಿಟ್ಟಿದ್ದರು.
ಮೊಹರಂ ಹಬ್ಬ ಕೇವಲ ಹಬ್ಬವಾಗಿರದೆ ಹಿಂದೂ–ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ನಮ್ಮ ಮೊರಬ ಗ್ರಾಮದಲ್ಲಿ ಮೊಹರಂ ಹಬ್ಬವು ಒಂದು ವಿಶಿಷ್ಟವಾದ ಸಾಂಸ್ಕೃತಿಕ ಆಚರಣೆಯಾಗಿದೆ ಎಂದು ಸಾಹಿತಿ ಡಿ.ಎಸ್. ನಾಯಿಕ ಹೇಳಿದರು.
ಮೊಹರಂ ಮೂಲಕ ನಮ್ಮ ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಕಿಗೆ ಬರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬಕ್ಕೆ ಬಹಳ ಪ್ರಾಶಸ್ತ್ಯ ನೀಡಿ ದೇವರಿಗೆ ಶ್ರದ್ಧಾಭಕ್ತಿ ಸಲ್ಲಿಸಲಾಗುತ್ತದೆಸುಖದೇವ ಕಾಂಬಳೆ, ಮುಖ್ಯ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ಬಸ್ತವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.