
ಬೈಲಹೊಂಗಲ: ಸರ್ವಧರ್ಮ ಸಮನ್ವಯದ ಸಂದೇಶ ಸಾರುವ ಮೊಹರಂ ಹಬ್ಬದ ಸಂಭ್ರಮದ ಆಚರಣೆಗಾಗಿ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಈಗಾಗಲೇ ತಯಾರಿ ಶುರುವಾಗಿದೆ.
ವಾಲ್ಮೀಕಿ ಸಮಾಜದ ಯುವ ಪಡೆ ಹಾಗೂ ಎಲ್ಲ ಸಮಾಜದವರು ಸೇರಿಕೊಂಡು ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ.
ಚಿನಕೋಲು, ಹುಲಿಕುಣಿತದ ತಯಾರಿ: ವಾಲ್ಮೀಕಿ ಸಮಾಜದ ಯುವ ಪಡೆಯ 20ಕ್ಕೂ ಹೆಚ್ಚಿನ ಜನ ಸದಸ್ಯರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಿರಿಯರ ಮಾರ್ಗದರ್ಶನದಂತೆ ಮೊಹರಂ ಗೀತೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.
ವಕ್ಕುಂದದ ಸುತ್ತಲಿನ ಜನರೂ ಮೊಹರಂ ತಯಾರಿಯ ಸೊಬಗು ಕಾರಣ ಗ್ರಾಮಕ್ಕೆ ಬರುತ್ತಿದ್ದಾರೆ. ಜುಲೈ 17ರಂದು ಹಬ್ಬದ ಆಚರಣೆಯಲ್ಲಿ ಹುಲಿಕುಣಿತ, ಹಲಗೆ ವಾದನ, ಮೊಹರಂ ಪದಗಳ ಜನರನ್ನು ಆಕರ್ಷಿಸಲಿವೆ.
ಮೊದಲಿನಿಂದ ಗ್ರಾಮದ ಎಲ್ಲ ಸಮಾಜದವರು ಸೇರಿ ಮೊಹರಂ ಆಚರಿಸುತ್ತೇವೆ. ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸುವುದರ ಸಂಭ್ರಮವೇ ಬೇರೆ.ನಾಗಪ್ಪ ಹೊಸೂರ, ಚಿನಕೋಲ ತಂಡದ ಸದಸ್ಯ
ಚಿನಕೋಲು ಮಜಲಿನ ಹಿರಿಯರಾದ ಭೀಮಪ್ಪ ಹಲ್ಕಿ, ಈರಪ್ಪ ತಲ್ಲೂರ, ಹುಸೇನ್ ನನ್ನೆಖಾನ, ಸಿದ್ದಪ್ಪ ಪೂಜೇರಿ, ವಾದ್ಯಮೇಳದ ಶಂಕರ ಚಿಮ್ಮಕ್ಕಿ, ಯಮನಪ್ಪ ಚಿಮ್ಮಕ್ಕಿ, ಗಾಯಕರಾದ ಮಡಿವಾಳಪ್ಪ ತಳವಾರ, ರುದ್ರಪ್ಪ ಹೊಸೂರ, ರಾಮಪ್ಪ ಸುರಪುರ ಅವರು ಯುವಕರಿಗೆ ಮಾರ್ಗದರ್ಶನ ನೀಡಿ, ತಯಾರಿ ಮಾಡುತ್ತಿದ್ದಾರೆ.
‘ವಿಶ್ವದಾದ್ಯಂತ ಮೊಹರಂ ಹಬ್ಬವನ್ನು ಜಾತಿ ಭೇದವಿಲ್ಲದೆ ಆಚರಿಸಲಾಗುತ್ತದೆ. ಸರ್ವಧರ್ಮೀಯರು ಆಚರಿಸುವ ವೈಶಿಷ್ಟ ಹಬ್ಬವಿದು. ಅಲಾಯಿ ಹಬ್ಬ ಅಂತಲೂ ಕರೆಯುತ್ತಾರೆ. ನಮ್ಮ ಪೂರ್ವಜರ ಕಾಲದಿಂದಲೂ ಚಿನಕೋಲು, ಹುಲಿಕುಣಿತ ಪ್ರಮುಖ ಆಕರ್ಷಣೆಯಾಗಿದೆ’ ಎಂದು ಹಿರಿಯ ಭೀಮಪ್ಪ ಹಲ್ಕಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.