ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಶಹಾಬಂದರ ಗ್ರಾಮದಲ್ಲಿ ಬುಧವಾರ ರಾತ್ರಿ ಯುವಕನ ಕೊಲೆ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧ ಶಂಕೆಯಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಶಹಾಬಂದರದ ಬಸವರಾಜ ಬುಕನಟ್ಟಿ, ವಿಠ್ಠಲ ಬುಕನಟ್ಟಿ ಬಂಧಿತರು. ಮಹಾಂತೇಶ ಬುಕನಟ್ಟಿ ಕೊಲೆಯಾದವರು.
‘ತನ್ನ ಪತ್ನಿಯೊಂದಿಗೆ ಮಹಾಂತೇಶ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಬಸವರಾಜನು ಮಹಾಂತೇಶ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ. ಆತನಿಗೆ ಮತ್ತೊಬ್ಬ ಸಹಾಯ ಮಾಡಿರುವ ಶಂಕೆ ಇತ್ತು. ಹಾಗಾಗಿ ವಿಠ್ಠಲನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ಚಿಕ್ಕೋಡಿಯ ಲಾಡ್ಜ್‌ನಲ್ಲಿ ಬಸವರಾಜನನ್ನು ಬಂಧಿಸಿದ್ದೇವೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಜಗಳವಾಗಿ, ಹಿರಿಯರ ಸಮ್ಮುಖದಲ್ಲಿ ಮಾತುಕತೆಯೂ ಆಗಿತ್ತು. ಖಾಸಗಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬಸವರಾಜ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬೆಳಗಾವಿಯಲ್ಲೇ ದಂಪತಿ ವಾಸವಿದ್ದರು. ಅಕ್ರಮ ಸಂಬಂಧ ವಿಚಾರವಾಗಿ ಮನೆಯಲ್ಲಿ ಆಗಾಗ ಗಲಾಟೆಯಾದ ಕಾರಣ, ಎಂಟು ತಿಂಗಳ ಹಿಂದೆ ಪತ್ನಿ ತವರುಮನೆ ಚಿಕ್ಕೋಡಿಗೆ ಹೋಗಿದ್ದರು. ಈ ದಂಪತಿಗೆ ಇರುವ ಮಗುವನ್ನು ಬಸವರಾಜ ಸಾಕುತ್ತಿದ್ದ. ಮಗು ನೋಡಲು ಪತ್ನಿ ಬಾರದಿರುವುದಕ್ಕೆ ಸಿಟ್ಟಾಗಿದ್ದ’ ಎಂದರು.
‘ಪತ್ನಿ ಕೊಲೆ ಮಾಡುವುದಾಗಿಯೂ ಬಸವರಾಜ ಹೇಳಿಕೊಂಡಿದ್ದ. ಆದರೆ, ಯಮಕನಮರಡಿ ಮತ್ತು ಚಿಕ್ಕೋಡಿ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿ ಕೈಗೊಂಡ ಕ್ರಮದಿಂದ ಮಹಿಳೆ ಜೀವ ಉಳಿದಿದೆ. ಮದ್ಯ ಸೇವಿಸಿದ ಅಮಲಿನಲ್ಲಿ ಸಿಕ್ಕಿಬಿದ್ದ ಬಸವರಾಜ ಬಳಿ ಇದ್ದ ಬ್ಯಾಗ್‌ನಲ್ಲಿ ಎರಡು ಹರಿತವಾದ ಆಯುಧ ಸಿಕ್ಕಿವೆ’ ಎಂದು ಹೇಳಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಯಮಕನಮರಡಿ ಠಾಣೆ ಇನ್‌ಸ್ಪೆಕ್ಟರ್ ಜಾವೇದ್ ಮುಷಾಪುರಿ ಇದ್ದರು.
ಪ್ರತಿ ಉಪವಿಭಾಗಕ್ಕೂ: ಎಸ್‌ಪಿ
‘ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಸಂಚಾರ ದಟ್ಟಣೆ ನಿರ್ವಹಿಸಲು ಅನುಕೂಲವಾಗಲೆಂದು ಸರ್ಕಾರದ ನಿರ್ದೇಶನದಂತೆ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಕ್ಯಾಮೆರಾ ಖರೀದಿಸಿದ್ದೇವೆ’ ಎಂದು ಡಾ.ಭೀಮಾಶಂಕರ ಗುಳೇದ ಹೇಳಿದರು. ‘ಮುಂದಿನ ದಿನಗಳಲ್ಲಿ ಪ್ರತಿ ಉಪವಿಭಾಗಕ್ಕೆ ಒಂದು ಡ್ರೋನ್ ಕ್ಯಾಮೆರಾ ಕೊಡಲು ಯೋಜನೆ ಹಾಕಿಕೊಂಡಿದ್ದೇವೆ. ಅದನ್ನು ಬಳಸುವ ಕುರಿತು ಪ್ರತಿ ಠಾಣೆಯ ಇಬ್ಬರು ಸಿಬ್ಬಂದಿಗೆ ತರಬೇತಿ ಕೊಡುತ್ತಿದ್ದೇವೆ. ವಿವಿಧ ಜಾತ್ರೆ ಹಬ್ಬ ಪ್ರವಾಹ ಬೆಂಕಿ ಅವಘಡ ಮತ್ತು ಭೂಕುಸಿತದ ವೇಳೆ ಇವು ನೆರವಿಗೆ ಬರಲಿವೆ’ ಎಂದರು.
ಮಹಿಳೆ ಕೊಲೆ: ಮತ್ತೆ ಮೂವರ ಬಂಧನ
ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿ ಮೈದುನನೇ ಅತ್ತಿಗೆ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಟಿಳಕವಾಡಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಸವಿತಾ ಗಣೇಶ ದಾವಲೆ ಗವಳಿ ಯಶ್ ಗಣೇಶ ದಾವಲೆ ಗವಳಿ ಆದಿತ್ಯ ಗಣೇಶ ದಾವಲೆ ಗವಳಿ ಬಂಧಿತರು. ಮನೆ ಆಸ್ತಿ ಸಲುವಾಗಿ ಗಣೇಶ ಲಕ್ಷ್ಮಣ ದಾವಲೆ ಗವಳಿ ಎಂಬಾತ ತನ್ನ ಅತ್ತಿಗೆ ಗೀತಾ ರಂಜೀತ ದಾವಲೆ ಗವಳಿ ಅವರನ್ನು ಸೆ.10ರಂದು ಕೊಲೆ ಮಾಡಿದ್ದ. ಆತನನ್ನು ಅಂದೇ ಪೊಲೀಸರು ಬಂಧಿಸಿದ್ದರು. ಈಗ ಆತನ ಪತ್ನಿ ಇಬ್ಬರು ಮಕ್ಕಳ ಬಂಧನವಾಗಿದೆ. ‘ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಗವಳಿ ಸಮುದಾಯದವರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.