ADVERTISEMENT

ಬಸವರಾಜ ಬೊಮ್ಮಾಯಿ ಅವರಿಂದ ಸಮತೋಲನದ ಆಡಳಿತ: ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:28 IST
Last Updated 29 ಜುಲೈ 2021, 13:28 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಗೋಕಾಕ: ‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿದ ಹೊಸ ಯೋಜನೆಗಳನ್ನು ಮತ್ತು ಜನಹಿತ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮತೋಲನ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಶೂನ್ಯ ಸಂಪಾದನಮಠದಲ್ಲಿ ಪಾದಪೂಜೆ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದರು.

‘ಬಸವರಾಜ ಅವರು ಯಡಿಯೂರಪ್ಪ ಮಾರ್ಗದರ್ಶನ ಪಡೆಯಲಿದ್ದಾರೆ. ರಾಜ್ಯದ ಗೃಹ ಮಂತ್ರಿಯಾಗಿ ಮತ್ತು ಅದಕ್ಕೂ ಪೂರ್ವದಲ್ಲಿ ಇನ್ನೂ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೊರೊನಾದಂತಹ ಸಮಯದಲ್ಲಿ ಜನತೆಯ ಹಿತ ಕಾಪಾಡಲು ಕಠಿಣ ಕ್ರಮಗಳನ್ನು ತೆಗೆದುಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದಾರೆ. ಅವರಿಂದ ರಾಜ್ಯದ ಜನತೆ ಉತ್ತಮ ಆಡಳಿತ ನಿರೀಕ್ಷೆ ಮಾಡಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಶ್ರೀಗಳು, ಸಂತರು, ಶರಣರು ನೋವಿನಲ್ಲಿರುವ ಜನರಿಗೆ ಸಂತ್ವಾನ ಹೇಳುವುದು ಸಹಜ. ಯಡಿಯೂರಪ್ಪ ಅವರು ಸಂಕಷ್ಟ ಅನುಭವಿಸುವ ಸಂದರ್ಭದಲ್ಲಿ ಸ್ವಾಮೀಜಿಗಳು ಅವರಿಗೆ ಧೈರ್ಯ ತುಂಬಿದ್ದಾರೆ. ಅದೇ ರೀತಿ ರಾಜ್ಯದಾದ್ಯಂತ ಅಹಿಂದ ಚಳವಳಿಯನ್ನು ಆರಂಭಿಸಿದಾಗ ಸಿದ್ದರಾಮಯ್ಯ ಅವರಿಗೂ ಬೆಂಬಲ ವ್ಯಕ್ತಪಡಿಸಿದ್ದೆವು. ನಮ್ಮ ಜಾತ್ಯತೀತ ನಿಲುವು ಕಾಪಾಡಿಕೊಂಡು ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯವಾಗಿದೆ’ ಎಂದು ಸಮರ್ಥಿಸಿಕೊಂಡರು.

ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘಾಜೇಂದ್ರ ಸ್ವಾಮೀಜಿ, ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಘಟಪ್ರಭಾದ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಮದುರ್ಗ ಬಟಕುರ್ಕಿಯ ಬಸವಪ್ರಭು ಸ್ವಾಮೀಜಿ, ಕಪರಟ್ಟಿ ಕಳ್ಳಿಗುದ್ದಿಯ ಬಸವರಾಜ ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.