ADVERTISEMENT

ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 13:25 IST
Last Updated 22 ಫೆಬ್ರುವರಿ 2024, 13:25 IST
<div class="paragraphs"><p> ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾಗೆ ಟಿಕೆಟ್‌ ನೀಡುವ ವಿಷಯ ಚರ್ಚೆಯಾಗಿದೆ. ಆದರೆ, ಟಿಕೆಟ್‌ ಕೊಡಲು ನಾವು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

‘ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಲಕ್ಷ್ಮಣರಾವ್‌ ಚಿಂಗಳೆ, ಗಜಾನನ ಬುಟಾಳಿ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ಕೊಡುತ್ತೇವೆ ಹೊರತು ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಿಂದ ಟಿಕೆಟ್‌ ನೀಡುವ ಸಂಬಂಧ ತಲಾ ಇಬ್ಬರ ಹೆಸರನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿದ್ದೇವೆ. ಆ ಪಟ್ಟಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ‍ಪುತ್ರ ಮೃಣಾಲ್‌ ಹೆಸರೂ ಇದೆ. ಆದರೆ, ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನಿಸಲಿದೆ’ ಎಂದರು.

‘ಈ ಚುನಾವಣೆಯಲ್ಲಿ ನನ್ನನ್ನು ಕಣಕ್ಕಿಳಿಸಲು ಚರ್ಚೆ ನಡೆದಿರಬಹುದು. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಉದ್ದೇಶದಿಂದ ನಾನು ಸ್ಪರ್ಧಿಸುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಟಿಕೆಟ್‌ ಕೊಡಲು ಜಾತಿ ಲೆಕ್ಕಾಚಾರ ನಡೆದಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೊದಲು ಗೆಲ್ಲುವ ಮತ್ತು ಜನಪ್ರಿಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸುತ್ತೇವೆ. ನಂತರ ಜಾತಿ ಲೆಕ್ಕಾಚಾರ’ ಎಂದರು.

‘ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಬೂತ್‌ಮಟ್ಟದ ಸಭೆ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.