ADVERTISEMENT

ನಂದಗಡ: ಅವ್ಯವಹಾರ ಆರೋಪ- ತನಿಖೆಗೆ ಆದೇಶ

ನಂದಗಡದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಿರುದ್ಧ ವಿಠ್ಠಲ ಹಲಗೇಕರ, ಚನ್ನರಾಜ ಹಟ್ಟಹೊಳಿ ಸಮರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 8:04 IST
Last Updated 16 ಆಗಸ್ಟ್ 2025, 8:04 IST
ಚನ್ನರಾಜ ಹಟ್ಟಿಹೊಳಿ
ಚನ್ನರಾಜ ಹಟ್ಟಿಹೊಳಿ   

ಬೆಳಗಾವಿ: ಖಾನಾಪುರ ತಾಲ್ಲೂಕಿನ ನಂದಗಡದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ (ಮಾರ್ಕೆಟಿಂಗ್ ಸೊಸೈಟಿ) ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು, ಬೆಳಗಾವಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ವಿಚಾರಣಾಧಿಕಾರಿ ಆಗಿ ನೇಮಕ ಮಾಡಲಾಗಿದೆ. ಮೂರು ತಿಂಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕ ರವೀಂದ್ರ ಪಾಟೀಲ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರಡಿ ನಂದಗಡ ಮಾರ್ಕೆಟಿಂಗ್ ಸಂಘದ ಲೆಕ್ಕಪರಿಶೋಧನಾ ವರದಿ, ಸಂಘದ ನಿರ್ದೇಶಕರಿಗೆ ₹172.61 ಲಕ್ಷ ಮುಂಗಡ ವಿತರಣೆ, ಸಂಘದಲ್ಲಿ ಕೈಗೊಳ್ಳಲಾದ ನಗದು ವ್ಯವಹಾರ, ಸಾಲ ವಿತರಣೆಯಲ್ಲಿ ಅವ್ಯವಹಾರ, ಅಡಮಾನ ಸಾಲಗಳಿಗೆ ಬಡ್ಡಿ ಪಡೆಯದಿರುವುದು, ಸೇವಾ ನಿವೃತ್ತಿ ಹೊಂದಿದ್ದ ಸಂಘದ ವ್ಯವಸ್ಥಾಪಕರಿಗೆ ಗೌರವಧನ ನಿರ್ಧರಿಸಿ ಮರು ನೇಮಕಾತಿ ಮಾಡಿಕೊಂಡಿರುವುದು, ಲೋಂಡಾ ಗ್ರಾಮದಲ್ಲಿ ಸಂಘ ₹24 ಲಕ್ಷ ವ್ಯಯಿಸಿ ನಿರ್ಮಿಸಿದ ಕಟ್ಟಡ ಕಾಮಗಾರಿಯಲ್ಲಿ ಸಹಕಾರ ಇಲಾಖೆಯ ಮಾರ್ಗಸೂಚಿಯ ಪಾಲನೆ, ಸಂಘದಿಂದ ನೀಡಿರುವ ₹22.42 ಲಕ್ಷ ಮುಂಗಡ ಸೇರಿದಂತೆ ಸಂಘದಲ್ಲಿ ನಡೆದಿದೆ ಎನ್ನಲಾದ ವಿವಿಧ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಬೇಕು ಎಂದು ಆದೇಶದಲ್ಲಿ ನಿರ್ದೇಶಿಸಿದ್ದಾರೆ.

ರಾಜಕೀಯ ಲೇಪ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕ ವಿಠ್ಠಲ ಹಲಗೇಕರ ಈಚೆಗೆ ಈ ಅವ್ಯವಹಾರದ ಆರೋಪ ಮಾಡಿದ್ದರು. ಈ ಅವ್ಯವಹಾರದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು.

ADVERTISEMENT

ಸಂಘದ ಹಾಲಿ ಅಧ್ಯಕ್ಷ, ಬಿಡಿಸಿಸಿ ನಿರ್ದೇಶಕ ಅರವಿಂದ ಪಾಟೀಲ ಮುಂಬರುವ ಅಕ್ಟೋಬರ್ 19ರಂದು ನಡೆಯಲಿರುವ ಬಿಡಿಸಿಸಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಪೂರ್ವಸಿದ್ಧತೆ ನಡೆಸಿದ್ದಾರೆ. ಇದೇ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಳಾಗಿರುವ ಚನ್ನರಾಜ ಹಟ್ಟಿಹೊಳಿ ಹಾಗೂ ವಿಠ್ಠಲ ಹಲಗೇಕರ ಅವರಿಬ್ಬರೂ ಅರವಿಂದ ಪಾಟೀಲ ಅವರಿಗೆ ಹಿನ್ನಡೆ ಉಂಟು ಮಾಡಬೇಕು ಎಂಬ ಉದ್ದೇಶದಿಂದ ಮಾರ್ಕೆಟಿಂಗ್ ಸೊಸೈಟಿ ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಅವ್ಯವಹಾರಗಳ ತನಿಖೆಗೆ ರಾಜಕೀಯ ಲೇಪ ಅಂಟಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.