ADVERTISEMENT

ಅಥಣಿ: ಪುನರ್ವಸತಿ ಕೇಂದ್ರ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 15:25 IST
Last Updated 1 ಸೆಪ್ಟೆಂಬರ್ 2021, 15:25 IST
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು   

ಅಥಣಿ: ‘ತಾಲ್ಲೂಕಿನ ನಂದೇಶ್ವರ ಗ್ರಾಮದ ಪುನರ್ವಸತಿ ಕೇಂದ್ರವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿ ಗ್ರಾಮಸ್ಥರು ಅಥಣಿ– ಜಮಖಂಡಿ ರಾಜ್ಯ ಹೆದ್ದಾರಿಯನ್ನು ಆರು ತಾಸುಗಳವರೆಗೆ ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.

ಮಹಿಳೆಯರು ಸೇರಿದಂತೆ ನೂರಾರು ಮಂದಿ ನೆರೆ ಸಂತ್ರಸ್ತರು ಪಾಲ್ಗೊಂಡಿದ್ದರು. ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದಾಗ ಪುನರ್ವಸತಿ ಕೇಂದ್ರವೂ ಜಲಾವೃತಗೊಂಡಿತ್ತು. ಹೀಗಾಗಿ, ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬಂದು ನಮ್ಮ ಅಳಲು ಆಲಿಸಬೇಕು ಎಂದು ಪಟ್ಟುಹಿಡಿದಿದ್ದರು. ತಾಲ್ಲೂಕು ಆಡಳಿತದಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ಥಳಕ್ಕೆ ಬಂದು ಹಿಪ್ಪರಗಿ ಅಣೆಕಟ್ಟಿನ ಹಿನ್ನೀರು ಹೋರಾಟ ಸಮಿತಿಯ ಮಖಂಡರಿಂದ ಮನವಿ ಸ್ವೀಕರಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ‘ಬೇಡಿಕೆ ಬಗ್ಗೆ ಚರ್ಚಿಸುವ ಕುರಿತು ಸೆ.15ರಂದು ಶಾಸಕ ಮಹೇಶ ಕುಮಠಳ್ಳಿ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ಸಭೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರವಾಗಿ ₹ 15.39 ಕೋಟಿಯನ್ನು ನೇರವಾಗಿ ಬ್ಯಾಂಕ್‌ ಖಾತೆ ಮೂಲಕ ಜಮೆ ಮಾಡಲಾಗಿದೆ. ತುರ್ತು ಪರಿಹಾರವಾಗಿ ₹ 10ಸಾವಿರ ನೀಡಲಾಗಿದೆ. ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ₹ 13 ಸಾವಿರವನ್ನು ಜಮಾ ಮಾಡಲಾಗುತ್ತಿದೆ. ತಾಂತ್ರಿಕ ದೋಷದಿಂದ ಕೆಲವರಿಗೆ ಪರಿಹಾರ ನೀಡಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಸಿ ಎಲ್ಲರಿಗೂ ಪರಿಹಾರ ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.

ಮುಖಂಡ ರಮೇಶಗೌಡ ಪಾಟೀಲ ಮಾತನಾಡಿ, ‘ನಂದೇಶ್ವರ, ಜನವಾಡ, ಮಹೇಶವಾಡಗಿ ಸೇರಿದಂತೆ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ನಾವೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದೇವೆ. 2019ರಲ್ಲಿ ಉಂಟಾದ ಪ್ರವಾಹದಿಂದ ಹಾನು ಅನುಭವಿಸಿದ ಬಹಳಷ್ಟು ಮಂದಿಗೆ ಪರಿಹಾರ ಸಿಕ್ಕಿಲ್ಲ. 2021ರಲ್ಲಿ ನಂದೇಶ್ವರದ ಜಮೀನುಗಳು ಸಂಪೂರ್ಣ ಮುಳಗಡೆಯಾಗಿದೆ. ಸಮೀಕ್ಷೆ ನಡೆಸಿ ಸಮರ್ಪಕ ಪರಿಹಾರ ನೀಡಬೇಕು. ಕುಟುಂಬದ ಸಮೀಕ್ಷೆ ನಡೆಸಿ, ಪ್ರತಿ ಕುಟುಂಬಕ್ಕೆ ಒಂದು ನಿವೇಶನ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಸತ್ಯಪ್ಪ ಬಾಗೆನ್ನವರ, ಶಿವು ಗುಡ್ಡಾಪೂರ, ಶ್ರೀಕಾಂತ ಪೂಜಾರಿ, ರಾಜು ಜಮಖಂಡಿಕರ, ಗ್ರಾ.ಪಂ. ಅಧ್ಯಕ್ಷ ರಾಮಪ್ಪ ಪರಟಿ, ಯಲ್ಲವ್ವ ಪೂಜಾರಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಬಿ. ಹಳ್ಳೂರ, ಬಾಳಪ್ಪ ಪಾಟೀಲ ಪ್ರತಿಭಟನೆಯಲ್ಲಿ ‍ಪಾಲ್ಗೊಂಡಿದ್ದರು.

ತಹಶೀಲ್ದಾರ್ ದುಂಡಪ್ಪ ಕೋಮಾರ, ಇಒ ಶೇಖರ ಕರಬಸಪ್ಪಗೋಳ, ಉಪ ತಹಶೀಲ್ದಾರ್ ಮಹಾದೇವ ಬಿರಾದಾರ ಪಾಟೀಲ, ಎಇಇ ವೀರಣ್ಣ ವಾಲಿ, ಡಿಎಸ್ಪಿ ಗಿರೀಶ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್ಐ ಕುಮಾರ ಹಾಡಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.